ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರರ ಸಂಚು ಇರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿರುವಾಗಲೇ ಮೈಸೂರಿನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನುವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಶಂಕಿತ ಉಗ್ರನಿಗೆ ನೆರವಾಗಿರುವ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಕುಕ್ಕರ್ ನೊಳಗೆ ಸ್ಫೋಟಕ ಸಾಗಿಸುತ್ತಿದ್ದಾಗ ಮಂಗಳೂರಿನಲ್ಲಿ ಸ್ಫೋಟ ಸಂಭವಿಸಿತ್ತು. ಆಟೋ ಚಾಲಕ ಹಾಗೂ ಪ್ರಯಾಣಿಕನಿಗೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಇದೊಂದು ಅಪಘಾತ ಎಂದು ಹೇಳಲಾಯಿತಾದರೂ ನಂತರದ ಹಂತದಲ್ಲಿ ಇದು ಭಯೋತ್ಪಾದಕ ಕೃತ್ಯ ಎನ್ನುವ ಮಾಹಿತಿಯನ್ನು ಡಿಜಿಪಿ ಪ್ರವೀಣ್ ಸೂದ್ ನೀಡಿದ್ದರು. ಇದೀಗ ತನಿಖೆಗಾಗಿ ಹತ್ತು ತಂಡಗಳನ್ನು ರಚಿಸಲಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿ ಆತ್ಮಹತ್ಯಾ ಬಾಂಬರ್ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣಕ್ಕೂ ಕೊಯಮತ್ತೂರು ಕಾರು ಸ್ಫೋಟಕ್ಕೂ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ.