ನ್ಯೂಸ್ ನಾಟೌಟ್: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಸೀಟು ಗಲಾಟೆ ಜೋರಾಗುತ್ತಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಕಾವು ಹೇಮನಾಥ್ ಶೆಟ್ಟಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಈ ನಡುವೆ ಸೀಟು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.
ಶಕುಂತಲಾ ಶೆಟ್ಟಿ ಅಭ್ಯರ್ಥಿತನ ಬಿಟ್ಟು ಕೊಡುವ ಪ್ರಮಾಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಹೇಳಿಕೆಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವ್ಯಂಗ್ಯವಾಡಿದ್ದಾರೆ. ಸೀಟು ಬಿಟ್ಟು ಕೊಡಲು ಅದು ಬಸ್ಸ್ ನ ಸೀಟ್ ಅಲ್ಲಾ. ಹೈಕಮಾಂಡ್ ತೀರ್ಮಾನಿಸಿ ಕೊಡುವ ಅಭ್ಯರ್ಥಿತನದ ಸೀಟು. ನಾನು ಈ ಬಾರಿ ಹೇಮನಾಥ ಶೆಟ್ಟಿಗೆ ಅಭ್ಯರ್ಥಿತನ ಬಿಟ್ಟುಕೊಡುವುದಾಗಿ ಪ್ರಮಾಣ ಮಾಡಿಯೇ ಇಲ್ಲ ಎಂದು ಹೇಳಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೀಗೆ ಪ್ರಮಾಣ ಮಾಡುವ ಪ್ರಮೇಯವೇ ಬರುವುದಿಲ್ಲ. ಹೈಕಮಾಂಡ್ ಮೂಲಕ ಆಯ್ಕೆಯಾದ ವ್ಯಕ್ತಿ ಇನ್ನೊಬ್ಬರಿಗೆ ಪಕ್ಷದ ಟಿಕೆಟ್ ಕೊಡುವಂತೆ ಸೂಚಿಸಲು ಸಾಧ್ಯವೂ ಇಲ್ಲ. ನಾನು ಪ್ರಮಾಣ ಮಾಡುವ ಮೊದಲು ಕಾವು ಹೇಮನಾಥ ಶೆಟ್ಡಿ ಪ್ರಮಾಣ ಮಾಡಬೇಕು. ಪಕ್ಷದಲ್ಲಿದ್ದು ಪಕ್ಷಕ್ಕೆ ದ್ರೊಹ ಮಾಡಿಲ್ಲ. ವಿರೋಧ ಪಕ್ಷದವರ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎನ್ನುವ ಪ್ರಮಾಣವನ್ನು ಹೇಮನಾಥ ಶೆಟ್ಟಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮಾಣ ಮಾಡಿದ್ದೇನೆ ಎನ್ನುವ ವಿಚಾರ ಸಂಪೂರ್ಣ ಸುಳ್ಳು. ವಿರೋಧ ಪಕ್ಷದವರ ಅಣತಿಯಂತೆ ನಡೆಯುವ ಹೇಮನಾಥ ಶೆಟ್ಟಿ ಮೊದಲು ಪಕ್ಷಕ್ಕೆ ನಿಷ್ಠರಾಗಬೇಕು. ಆ ಬಳಿಕ ಅಭ್ಯರ್ಥಿತನದ ಬಗ್ಗೆ ಯೋಚಿಸಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.