ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್ : ಸುಳ್ಯ ನಗರದಲ್ಲಿ ಬೇಸಿಗೆ ಬಂತೆಂದರೆ ನೀರಿನ ಸಮಸ್ಯೆ ದಿಢೀರ್ ಪ್ರತ್ಯಕ್ಷವಾಗುತ್ತದೆ. ಒಂದಿಷ್ಟು ಹನಿ ನೀರಿಗೋಸ್ಕರ ಜನ ಪರದಾಡುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಾರ್ಡ್ ವೊಂದರಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಒಂದಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಸುಳ್ಯದಲ್ಲಿ ನೀರಿನ ಸಮಸ್ಯೆ ಮತ್ತೆ ತಲೆದೂರಿದ್ದು ವ್ಯಕ್ತಿಯೊಬ್ಬರು ನಗರ ಪಂಚಾಯತಿನ ಎದುರೇ ಬಿಂದಿಗೆ (ಕೊಡಪಾನ) ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಕೆ ಎಸ್ ಉಮ್ಮರ್ ನಗರ ಪಂಚಾಯತ್ ಸದಸ್ಯರಾಗಿದ್ದಾರೆ. ನೀರಿನ ಸಮಸ್ಯೆ ತಲೆದೂರಿದ್ದರಿಂದ ಅವರು ಬಿಂದಿಗೆ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಮಾತ್ರವಲ್ಲ ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆ ವೇಳೆ ಬಿಂದಿಗೆ ಮೇಲೆ ಒಂದೊಂದು ರೀತಿಯ ಬರಹ ಗಮನ ಸೆಳೆಯಿತು. ಅದರಲ್ಲಿ ಮುಖ್ಯವಾದುವೆಂದರೆ ಧಿಕ್ಕಾರ ಧಿಕ್ಕಾರ ನಗರ ಪಂಚಾತ್ ಗೆ, ಕೇಳುವವರಿಲ್ಲ ಜನರ ಕಷ್ಟ, ನೀರು ಕೊಡಿ ನೀರು ಕೊಡಿ ಜನತೆಗೆ, ತೊಲಗಿರಿ ತೊಲಗಿರಿ ನೀರು ಕೊಡಲು ಸಾಧ್ಯವಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿರಿ, ಎಂದು ಜನತೆಯ ಪರ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಮಾತನಾಡಿದ ನಗರ ಪಂಚಾಯತ್ ಸದಸ್ಯ ಕೆಎಸ್ ಉಮ್ಮರ್ , ಕಳೆದ ೬ ತಿಂಗಳಿಂದ ಸುಳ್ಯನಗರದಲ್ಲಿ ಭಾರೀ ನೀರಿನ ಸಮಸ್ಯೆಯಿದ್ದು,ಯಾವ ಸಾರ್ವಜನಿಕರಾಗಲಿ, ಅಧಿಕಾರಿಗಳಾಗಲಿ ಎಚ್ಚೆತ್ತುಕೊಂಡಿಲ್ಲ.
ಆದರೆ ಈಗ ಕಳೆದ ಹತ್ತು ದಿನಗಳಿಂದ ಇಲ್ಲಿನ ಜನರಿಗೆ ನಗರ ಪಂಚಾಯತಿಯಿಂದ ಸರಿಯಾಗಿ ನೀರಿನ ಸರಬರಾಜು ಆಗುತ್ತಿಲ್ಲ.ಇದರಿಂದ ಬಡ ಕುಟುಂಬಗಳು ನೀರಿಗೋಸ್ಕರ ಪರದಾಡುವ ಪರಿಸ್ಥಿತಿ ಬಂದಿದೆ. ಬಹುತೇಕ ಜನರು ಕೂಲಿ ಕೆಲಸ ಮಾಡಿ ಬದುಕುವವರು.ಹಾಗೂ ಸ್ವಂತವಾಗಿ ಬೋರ್ ವೆಲ್ ,ಬಾವಿ ಕೊರೆಸಲು ಇವರ ಬಳಿ ಹಣವಿಲ್ಲ.ಮತ್ತು ಕುಡಿಯಲು ನೀರು,ಒಂದು ತುತ್ತು ಅನ್ನ ಇಡಲು ನೀರಿಗೋಸ್ಕರ ಪರದಾಡುವ ಪರಿಸ್ಥಿತಿ ಬಂದಿದೆ. ಆದರೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಇನ್ನೂ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.