ವರದಿ: ರಸಿಕಾ ಮುರುಳ್ಯ
ನ್ಯೂಸ್ ನಾಟೌಟ್ : ಸುಳ್ಯ ನಗರದಲ್ಲಿ ಬೇಸಿಗೆ ಬಂತೆಂದರೆ ನೀರಿನ ಸಮಸ್ಯೆ ದಿಢೀರ್ ಪ್ರತ್ಯಕ್ಷವಾಗುತ್ತದೆ. ಜವಾಬ್ದಾರಿಯುತ ಜನ ಪ್ರತಿನಿಧಿಗಳ ಬೇಜಾವಾಬ್ದಾರಿ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬಡ ಜನರು ಒದ್ದಾಡುತ್ತಿದ್ದಾರೆ. ಸದ್ಯ ಇದಕ್ಕೊಂದು ಪ್ರತ್ಯಕ್ಷ ಉದಾಹರಣೆ ಸುಳ್ಯ ನಗರ ವ್ಯಾಪ್ತಿಯ ಕೇರ್ಪಳದ ಬೂಡು ವಾರ್ಡ್.
ಕಳೆದ ಹತ್ತು ದಿನಗಳಿಂದ ಇಲ್ಲಿನ ಜನರಿಗೆ ಸರಿಯಾಗಿ ನಗರ ಪಂಚಾಯತ್ ನ ನೀರು ಸರಬರಾಜು ಆಗುತ್ತಿಲ್ಲ. ಬಹುತೇಕ ಜನರು ಕೂಲಿ ಕೆಲಸ ಮಾಡಿಕೊಂಡು ಬದುಕುವವರು. ಬೋರ್ ವೆಲ್ ಕೊರೆಸಲು ಇವರ ಬಳಿ ಹಣವಿಲ್ಲ. ನಗರ ಪಂಚಾಯತ್ ನೀರನ್ನೇ ಅವರು ಅವಲಂಭಿಸಿದ್ದಾರೆ. ಆದರೆ ಪ್ರತಿ ಸಲವೂ ನೀರಿಗಾಗಿ ಹೊರಬರುವ ಇವರ ಧ್ವನಿ ಯಾರಿಗೂ ಕೇಳದಿರುವುದು ವಿಪರ್ಯಾಸವೇ ಸರಿ. ನೀರು ಯಾಕೆ ಸಿಗುತ್ತಿಲ್ಲ ಎನ್ನುವ ಕಾರಣ ಕೇಳಿದ್ರೆ ಪಂಪ್ ಸರಿ ಇಲ್ಲ ಅನ್ನುವ ಉತ್ತರ ಬರುತ್ತಿದೆ. ‘ನೀರು ಏಪೋ ಬರ್ಪುಂಡು’ (ನೀರು ಯಾವಾಗ ಬರುತ್ತೆ) ಅಂತ ಪ್ರತಿನಿತ್ಯ ನೊಂದ ಜನರು ಕೇಳುವಂತಾಗಿದೆ. ಸ್ವತಃ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಕೂಡ ಅಸಹಾಯಕರಾಗಿದ್ದಾರೆ.
ಕೇರ್ಪಳ ಬೂಡು ವಾರ್ಡ್ಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು. ಆದರೆ ಕಳೆದ ೧೦ ದಿನಗಳಿಂದ ಸಮಸ್ಯೆ ಬಿಗಡಾಯಿಸಿ ಬಿಟ್ಟಿದೆ. ಈ ಬಗ್ಗೆ ವಾರ್ಡ್ ಸದಸ್ಯ ರಿಯಾಜ್ ನ್ಯೂಸ್ ನಾಟೌಟ್ ಜತೆಗೆ ಸಮಸ್ಯೆ ಹಂಚಿಕೊಂಡಿದ್ದು ಹೀಗೆ, ‘ದುಡ್ಡು ಇರುವ ಜನರು ಬೋರ್ ವೆಲ್ ಕೊರೆಸಿಕೊಂಡಿದ್ದಾರೆ. ಹಣ ವಿಲ್ಲದೆ ದಿನನಿತ್ಯ ಕೂಲಿ ಕೆಲಸಕ್ಕೆ ಹೋಗುವ ಜನರು ವಾರ್ಡ್ ನಲ್ಲಿ ತುಂಬಾ ಇದ್ದಾರೆ. ಅವರಿಗೆ ಸರಿಯಾಗಿ ನೀರು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕಲ್ಲು ಮುಟ್ಲಿನಲ್ಲಿರುವ ಪಂಪ್ ಹೌಸ್ ನಿಂದ ಸುಳ್ಯದ ಕುರುಂಜಿ ಗುಡ್ಡೆಗೆ ನೀರು ಬರಬೇಕು. ಅಲ್ಲಿಂದ ಅದು ಕೇರ್ಪಳ ಬೂಡು ವಾಡ್Fಗೆ ಸರಬರಾಜು ಆಗುತ್ತದೆ. ಈಗ ೧೦ ದಿನಗಳಿಂದ ಪಂಪ್ ಹೌಸ್ ಸರಿ ಇಲ್ಲದ ಕಾರಣಕ್ಕೆ ನೀರು ಬರುತ್ತಿಲ್ಲ. ಜನರು ಪ್ರತಿ ದಿನವೂ ನನಗೆ ಕಾಲ್ ಮಾಡಿ ನೀರಿನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇಷ್ಟು ಸಮಸ್ಯೆ ಆದರೂ ಅಧಿಕಾರಿಗಳು ಮೌನವಾಗಿದ್ದಾರೆ. ನಿಜಕ್ಕೂ ಇದು ಬೇಸರ ಸಂಗತಿ’ ಎಂದು ತಿಳಿಸಿದರು.
ಪಂಪ್ ಹೌಸ್ ನಲ್ಲಿರುವ ಮೂರು ಬೋರ್ ಗಳನ್ನು ತಕ್ಷಣ ಸರಿಪಡಿಸಬೇಕು. ಅದರ ಬಗ್ಗೆಯೇ ಅಧಿಕಾರಿಗಳು ನಿಗಾವಹಿಸಬೇಕು. ನಗರದಲ್ಲಿರುವ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಉದ್ಯಮಿಗಳಿಗೂ ನೀರು ಇಲ್ಲದೆ ಬಹಳಷ್ಟು ಸಮಸ್ಯೆ.ಯಾಗಿದೆ. ನಾನು ಆ ವಾರ್ಡ್ನ ಸದಸ್ಯ, ನೀರಿಲ್ಲದೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ನಮಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಉತ್ತರ ಕೊಡಲಾಗದೆ ನಾನು ಮೌನಿಯಾಗಿದ್ದೇನೆ . ಇಷ್ಟೆಲ್ಲ ಸಮಸ್ಯೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿ ಕುಳಿತಿದ್ದಾರೆ. ಹಾಗಾದರೆ ಜವಾಬ್ದಾರಿ ಯಾರಿಗಿದೆ?, ಪದೇ ಪದೇ ಈ ಸಮಸ್ಯೆಯನ್ನು ಸರಿಪಡಿಸಲು ಆಗಿರುವುದು ನಿಜಕ್ಕೂ ದುರಾದೃಷ್ಟಕರ. ಹಳೆಯ ಪಂಪ್ ಗಳನ್ನು ಇನ್ನೂ ಬದಲಾಯಿಸದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ರಿಯಾಜ್ ನೋವು ತೋಡಿಕೊಂಡರು.