ನ್ಯೂಸ್ ನಾಟೌಟ್: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಅವರ ಕುಟುಂಬಕ್ಕೆ ನೀಡಬೇಕಿದ್ದ 45 ಲಕ್ಷ ರೂ. ಹಣವನ್ನು ಬಿಲ್ಲವ ಸಮುದಾಯ ಇದೀಗ ಸಂಪೂರ್ಣವಾಗಿ ಬಡವರಿಗೆ ಮನೆ ಕಟ್ಟಿ ಕೊಡುವುದಕ್ಕೆ ನಿರ್ಧರಿಸಿದೆ.
ಪ್ರವೀಣ್ ಹತ್ಯೆಯಾದ ನಂತರ ಅವರ ಕುಟುಂಬಕ್ಕೆ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ದಕ್ಷಿಣ ಕನ್ನಡ , ಉಡುಪಿ ಬಿಲ್ಲವ ಸಮುದಾಯ ನಿರ್ಧರಿಸಿತ್ತು. ಅದರಂತೆ ಗುತ್ತಿಗೆದಾರರಿಗೆ ಏಳು ಲಕ್ಷ ರೂ. ಮುಂಗಡ ಹಣವನ್ನೂ ಪಾವತಿಸಿತ್ತು. ಈ ನಡುವೆ ರಾಜ್ಯ ಸರಕಾರ ಪ್ರವೀಣ್ ಗೆ ಮನೆ ಕಟ್ಟಿ ಕೊಡುವುದಾಗಿ ಘೋಷಿಸಿತ್ತು. ಮಾತ್ರವಲ್ಲ ಇದಕ್ಕೆ ಅಗತ್ಯವಿದ್ದ ಹಣವನ್ನು ಕೂಡ ನೀಡಿತ್ತು. ಹೀಗಾಗಿ ಬಿಲ್ಲವ ಸಮುದಾಯ ಅಂದಾಜು ಹಾಕಿಕೊಂಡಿದ್ದ ಯೋಜನೆ ನಡೆಯಲಿಲ್ಲ. ಪ್ರವೀಣ್ ಗೆ ಮನೆ ಕಟ್ಟಿಕೊಡುವುದಕ್ಕೆ ಸಾಧ್ಯವಾಗದಿದ್ದರೂ ಅವರ ನೆನಪಿನಲ್ಲಿ ಅಂದುಕೊಂಡ ಹಣದಲ್ಲಿಯೇ ಒಟ್ಟು 14 ಮನೆಗಳನ್ನು ಬಡವರಿಗೆ ನಿರ್ಮಿಸಿ ಕೊಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಇದೀಗ ಮೊದಲ ಹಂತದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಚಂದ್ರಾವತಿ ಹಾಗೂ ಬಂಟ್ವಾಳ ಸಜಿಪಮೂಡ ನಿವಾಸಿ ಸುಂದರಿ ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎಂದು ಬಿಲ್ಲವ ಮುಖಂಡ ಜಯಂತ ನಡುಬೈಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು , ಪ್ರವೀಣ್ ಅವರಿಗೆ ಮನೆ ನಿರ್ಮಿಸುವ ದೃಷ್ಟಿಯಿಂದ ಹಣ ಸಂಗ್ರಹ ಮಾಡಿಕೊಂಡಿದ್ದೆವು. ಆದರೆ ನಳಿನ್ ಕುಮಾರ್ ಕಟೀಲ್ ಮನೆ ಸರಕಾರದಿಂದ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಹೀಗಾಗಿ ನಾವು ಅದರಿಂದ ಹಿಂದೆ ಸರಿದಿದ್ದು ಅದೇ ಹಣದಲ್ಲಿ ಪ್ರವೀಣ್ ಹೆಸರಿನಲ್ಲಿ 14 ಮನೆ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದೆವು,. ಈ ಪ್ರಕಾರವಾಗಿ ಮೊದಲ ಹಂತದಲ್ಲಿ ಎರಡು ಮನೆಗಳ ನಿರ್ಮಾಣವಾಗುತ್ತಿದೆ. ಉಳಿದಂತೆ 12 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು. ಬಿಲ್ಲವ ಮುಖಂಡ ಉಲ್ಲಾಸ್ ಕೋಟ್ಯಾನ್, ಅವಿನಾಶ್ ಸುವರ್ಣ ಮಂಗಳೂರು, ಮೋಹನ್ ದಾಸ್ ಬಂಗೇರ , ಕಿಶನ್ ಅಮಿನ್ ಉಪಸ್ಥಿತರಿದ್ದರು.