ನ್ಯೂಸ್ ನಾಟೌಟ್: ‘ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ಕಾಂತಾರ ಒಂದು ದಂತ ಕಥೆ ಚಲನಚಿತ್ರದ ಕೆಲವು ದೃಶ್ಯಗಳಲ್ಲಿ ಕೀಳಾಗಿ ಬಿಂಬಿಸಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ’ ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಕ್ಷೇಪ ವ್ಯಕ್ತಪಡಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅಲ್ಲಿಯವರೆಗೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು. ‘ಚಿತ್ರ ತಂಡದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಸಿನಿಮಾದಲ್ಲಿ ದೈವನರ್ತಕ ಸಮುದಾಯದ ವ್ಯಕ್ತಿಗಳನ್ನು ಅದರಲ್ಲೂ ಮಹಿಳೆಯರನ್ನು ಮತ್ತು ಯುವಜನರನ್ನು ಅವಮಾನ ಮಾಡುವ ದೃಶ್ಯಗಳಿವೆ. ದೈವಾರಾಧನೆಯಲ್ಲಿ ಮಾನವ ವಿರೋಧಿ ಹಿಂಸೆಗೆ ಅವಕಾಶ ಇಲ್ಲ. ಈ ಚಿತ್ರದ ಕೆಲವು ದೃಶ್ಯಗಳಿಂದ ದೈವನಿಂದನೆ ಆಗಿದೆ. ಆದರೂ ಈ ಸಿನಿಮಾಕ್ಕೆ ಚಲನಚಿತ್ರ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರವನ್ನು ನೀಡಿದೆ. ಈ ಕ್ರಮ ಸರಿಯಲ್ಲ’ ಎಂದರು.
‘ಅಸ್ಪೃಶ್ಯತಾ ಆಚರಣೆ ಮತ್ತು ಪರಿಶಿಷ್ಟ ಸಮುದಾಯಗಳ ಅವಮಾನ, ದೌರ್ಜನ್ಯಗಳು ಶಿಕ್ಷಾರ್ಹ ಅಪರಾಧ. ಕಾಂತಾರ ಸಿನಿಮಾದಲ್ಲಿ ಇಂತಹ ಕೆಲವು ದೃಶ್ಯಗಳು ಕಂಡು ದೈವ ನರ್ತಕ ಸಮುದಾಯದವರನ್ನು ನೋಡಿ ನಗುವಂತಾಗಿದೆ. ಇಂತಹ ದೃಶ್ಯಗಳಿಗೆ ಕತ್ತರಿ ಹಾಕುವವರೆಗೆ ಈ ಚಿತ್ರದ ಪ್ರದರ್ಶನವನ್ನು ತಡೆಯಲು ಜಿಲ್ಲಾ ದಂಡಾಧಿಕಾರಿಯವರು ಕ್ರಮಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.