ಸುಳ್ಯ: ನನ್ನ ದೀರ್ಘಕಾಲೀನ ಹಿರಿಯ ಸಹದ್ಯೋಗಿ ನಿವೃತ್ತರಾಗಿ ಮೈಸೂರಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ‘ಶಿವು’ (‘ಶಿವು’ ಎನ್ನುವ short name ಅವರ ಶ್ರೀಮತಿ /ಸಹದ್ಯೋಗಿ ಪ್ರೊ.ಸುಮಂಗಲವರು ಪ್ರೀತಿಯಿಂದ ಕೂಗಿ ಕರೆಯುತ್ತಿದ್ದ ಹೆಸರು.ಪಕ್ಕದಲ್ಲಿ ಕೂರುತ್ತಿದ್ದ ನನಗೆ ಕಿವಿಯಲ್ಲಿ ಅದೇ ಈಗಲೂ ರಿಂಗಣಿಸುತಿದೆ) ಅವರು ಕಳೆದ ರಾತ್ರಿ 12.45ರ ಸಮಯ ದಿವಂಗತರಾದ ವಿಷಯ ತಿಳಿದು ಅಘಾತವಾಯಿತು. ಅಘಾತವಾಯಿತೆನ್ನುವುದಕ್ಕೆ ಅನೇಕ ಕಾರಣಗಳಿವೆ.
ಸಣಕಲು ದೇಹದೊಳಗಿದ್ದ ಬೆಟ್ಟದ ಪ್ರೀತಿ
ಶಿವಣ್ಣ ಅವರು ದೇಹಗಾತ್ರದಲ್ಲಿ ಸಣಕಲಾದರೂ ಅದರೊಳಗಿದ್ದ ಮನಸ್ಸು -ಭಾವಗಳು ಹಿರಿದಾದವುಗಳು. ಅವರನ್ನು ತೀರ ಹತ್ತಿರದಿಂದ ಬಲ್ಲವರೆಲ್ಲರಿಗೂ ಇದು ಗೊತ್ತಿದೆ.ಅವರು ಮೂಲತ:ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನೆಲಮನೆ ಎನ್ನುವ ತೀರ ಗ್ರಾಮೀಣ ಊರಿನವರು. ಬಡತನ ಕಾಡಿದ ಹಿನ್ನೆಲೆಯಲ್ಲಿ ಅವರ ಹತ್ತನೆ ತರಗತಿ ಸೇರಿದಂತೆ ಉನ್ನತ ಶಿಕ್ಣಣದವರೆಗಿನ ಎಲ್ಲಾ ವು ಕರೆಸ್ಪಾಪಂಡೆಂಟ್ನಲ್ಲೆ.. ಅದೂ ಕೂಡ Rankings ಗಳಲ್ಲಿ ಶಿಕ್ಷಣ ಪಡೆದ ಪ್ರತಿಭಾಂತರವರು. ನಾನು ಅವರೊಂದಿಗೆ ಅವರೂರಿಗೆ ಹಲವು ಸಾರಿ ಹೋಗಿದ್ದೇನೆ. ಅವರು ಅವರೂರಿನ ಹಳ್ಳಿ ದಾರಿಗಳಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಊರ ದಾರಿಯಲ್ಲಿ ಸುತ್ತಾಡಿಸಿದರು ಅನ್ನುವುದಕ್ಕಿಂತ ಅವರ ಬದುಕಿನ ಸುಳಿ ದಾರಿಗಳಲ್ಲಿ ಸುತ್ತಾಡಿಸಿದ್ದಾರೆನ್ನುವುದು ಹೆಚ್ಚು ಸರಿ ಅನಿಸುತ್ತದೆ. ಸುತ್ತಾಡಿಸುವಾಗ ಅವರು ಹಳ್ಳಿಯಲ್ಲಿ ಹೋಟಲ್ ನಡೆಸಿದ್ದು ,ಬಡ್ಡಿಗೆ ಸಾಲನೀಡಿ ಸಿಕ್ಕಾಕಿಕೊಂಡದ್ದು ಹೀಗೆ ನೂರಾರು ತಮ್ಮ ಕಷ್ಟದ ಕಥನಗಳನ್ನು ನನ್ನೊಟ್ಟಿಗೆ ಕಥಿಸಿದ್ದುಂಟು. ಶಾಲಾ ಮಾಸ್ತರರಾಗಬೇಕಿದ್ದ ,ಅದಕ್ಕೂ ಮಾದಲು ಗ್ರಾಮ ಸೇವಕಾ ಹುದ್ದೆ ಗೆ ಸೇರಬೇಕಿದ್ದ ಅವಕಾಶಗಳಿಂದ ಕಳಚಿ ಕೊಂಡು ಶ್ರೀ ಕುರುಂಜಿ ವೆಂಕಟ್ರಮಣ ಗೌಡರು 1976ರಲ್ಲಿ ಸ್ಥಾಪಿಸಿದ ಮಾತೃಸಂಸ್ಥೆ ಎನ್ ಎಂ ಸಿಯಲ್ಲಿ ಉಪನ್ಯಾಸಕರಾಗಿ ಸೇರಿದ ಶಿವಣ್ಣವರು ಕನ್ನಡ ವಿಭಾಗವನ್ನು ಬೆಳಸುವಲ್ಲಿ ಯಶಸ್ವಿ ಯಾದದ್ದು ಈ ಹೊತ್ತಿಗೆ ಚರಿತ್ರೆ .ಈ ಚರಿತ್ರೆ ಅವರು N.M .Cಯಲಿ ಸೇವೆ ಸಲ್ಲಿದ 31 ವರ್ಷಗಳಲ್ಲಿ ಅಧ್ಯಯನ ಮಾಡಿ ಹೊರ ಹೋಗಿರುವ 29 ಬ್ಯಾಚುಗಳ ಎಲ್ಲಾ ವಿದ್ಯಾರ್ಥಿಗಳಿಗೂ ತಿಳಿದಿದೆ.
ನಡೆದಾಡುವ ಕೇಶಿರಾಜ
ಶಿವಣ್ಣವರು ಬಹುಶೃುತ ಪ್ರಾಧ್ಯಾಪಕರಾಗಿದ್ದರು.ಅವರಿಂದು ಅವರ ವಿದ್ಯಾರ್ಥಿಗಳ ಸ್ಮೃತಿಯಲ್ಲಿ ಸ್ಥಾಯಿಯಾಗಿದ್ದಾರೆಂದರೆ ಅದು ಅವರ ವ್ಯಾಕರಣ ,ಛಂದಸ್ಸು ಸಾಹಿತ್ಯ ಚರಿತ್ರೆ ಮತ್ತು ಕಾವ್ಯ ಮೀಮಾಂಸೆಯ ಖಚಿತತೆಯ ಪಾಠದ ಕಾರಣಕ್ಕಾಗಿ.ನಾವೆಲ್ಲಾ ವ್ಯಾಕರಣ ಸಮಸ್ಯೆಯನ್ನು ಬಿಡಿಸಬೇಕಾದರೆ ದಾರಿಯಲ್ಲಿ ಸಿಕ್ಕಲ್ಲೇ ಅಡ್ಡಹಾಕಿ ಅವರಿಂದ ಪರಿಹಾರ ಪಡೆಯುತ್ತಿದ್ದೆವು. ನಮಗೆ ಮತ್ತು ವಿದ್ಯಾರ್ಥಿಗಳಿಗೆಲ್ಲಾ ಅವರು “ನಡೆದಾಡುವ ಕೇಶಿರಾಜ’ರೆನ್ನು ವಂತೆ ಆಗಿದ್ದರು.
ಅನಾರೋಗ್ಯದ ಮುಳ್ಳು
ಭೌತಿಕ ಬಡತನವನ್ನು ಪೂರ್ಣವಾಗಿ ನಿಭಾಯಿಕೊಂಡ ಶಿವಣ್ಣ ಬೌದ್ಧಿಕವಾಗಿಯೂ ಪರಿಪೂರ್ಣ ವಾಗುವಲ್ಲಿ ಹೆಜ್ಜೆ ಇಟ್ಟವರೆ.ಯು .ಜಿ.ಸಿ ಯ fellowship ನಲ್ಲಿ ಹಾ ಮಾ ನಾಯಕರ ಮಾರ್ಗದರ್ಶನದಲ್ಲಿ ಜಾನಪದ ವಿಷಯಕವಾಗಿ ಸಂಶೋಧನೆಗೆ ಹೊರಟು ಉದ್ಯೋಗ ಲಭ್ಯವಾದ ಕಾರಣವಾಗಿ ಅದನ್ನುಕೈಬಿಟ್ಟರು.ಮತ್ತೊಮ್ಮೆ ಕಮಲ ಹಂಪನವರ ಮಾರ್ಗದರ್ಶನದಲ್ಲಿ “ಅತ್ತಿಮಬ್ಬೆ-ಒಂದು ಸಾಂಸ್ಕೃತಿಕ ಅಧ್ಯಯನ” ವಿಷಯವಾಗಿ ೨ಅಧ್ಯಾಯಗಳನ್ನು ಪೂರ್ತಿಮಾಡಿಯೂ ಅನಾರೋಗ್ಯ ಕಾರಣವಾಗಿ ಸಂಶೋಧನಾ ಕೈಂಕರ್ಯವನ್ನು ಪೂರ್ಣ ಮಾಡಲಾಗದ ನೋವು ಅವರಲ್ಲಿತ್ತು.
ಜೀವನ ಕೊಟ್ಟ ಊರು ಸುಳ್ಯ
ಶಿವಣ್ಣ ರು ವೈಯಕ್ತಿಕವಾಗಿ ಕೃತಿಕರ್ತರಲ್ಲ .ಆದರೆ ಕಾಲೇಜಿನ ಕನ್ನಡ ಸಂಘದ ಮೂಲಕ ವಿದ್ಯಾರ್ಥಿಗಳ ರಚನೆಗಳನ್ನು ಪ್ರಕಟಿಸುವಲ್ಲಿ ,ಸುಳ್ಯದ ಸ್ವಂತಿಕಾ ಬಳಗದ ಮೂಲಕ ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದವರು.ಅವರಲ್ಲೊಬ್ಬ ಶ್ರೇಷ್ಠ ಸಹೃದಯಿ ವಿಮರ್ಶಕನಿದ್ದ. ಅವರ ವಿದ್ವತ್ತ್ ಪೂರ್ಣ ವಿಮರ್ಶೆಯ ಒಂದು ನಿದರ್ಶವನ್ನು ಪ್ರಭಾಕರ ಶಿಶಿಲ ರ ದೇಶ ಯಾವುದಾದರೇನು ಕೃತಿಗೆ ಬರೆದ “ಕಥನದ ಕುರಿತು” ಬರಹವನ್ನು ಗಮನಿಸಬಹುದು .ಇಂತಹ ಹಲವು ವಿದ್ವತ್ ಪೂರ್ಣ ಮುನ್ನುಡಿ ,ಬೆನ್ನುಡಿಗಳು ಅವರಿಂದ ಬಂದಿವೆ.ಅವುಗಳನ್ನು ಸಂಕಲಿಸಿದ್ದರೂ ಅವರ ಹೆಸರಲ್ಲಿ ಕೃತಿ ರೂಪವೊಂದು ಇರುತಿತ್ತು.ಸುಳ್ಯ ಇವರಿಗೆ ಉದ್ಯೋಗ ಕೊಟ್ಟ ಊರು ಜೊತೆಗೆ ನಿವೃತರಾಗುವವರೆಗೆ ಅವರ ಕ್ರಿಯಾ ಜಗತ್ತು.ಶಿವಣ್ಣರು ಸ್ವಂತಿಕಾ ಸಾಹಿತ್ಯ ಬಳಗ.ಅಮರ ಕ್ರಾಂತಿ ಸುಳ್ಯ ಸಮಿತಿ ಇತ್ಯಾದಿಗಳ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದವರು
ಸರಳತೆಯ ಪ್ರತಿರೂಪ
ಪ್ರೊ.ಶಿವಣ್ಣರು ಸರಳ ಸಜ್ಜನಿಕೆಯ ಸಾಕಾರ ರೂಪಿಯಾಗಿದ್ದವರು.ನಿರ್ದಾಕ್ಷಿಣ್ಯ ಮತ್ತು ನಿಷ್ಟುರತೆಗೆ ಹೊರತಾದ ಇವರು ಎಲ್ಲರಿಗೂ ಪ್ರಿಯರು.ಒಂದು ಹಂತದಲ್ಲಿ ಸಾವನ್ನು ಮಡಿಲಲ್ಲಿ ಮಡಗಿಕೊಂಡು ಮೃತ್ಯಂಜಯನಂತೆ ಕಾಲವನ್ನು ಸವೆದ ಅವರು ತನ್ನ ವೃತ್ತಿ ಜೀವನವನ್ನು ಪೂರ್ಣಮಾಡಬಲ್ಲೆನೇ ಎನ್ನುವ ಆತಂಕದಲ್ಲಿ ಅದನ್ನು ಪೂರ್ಣಗೊಳಿದವರು. ಪ್ರಾಧ್ಯಾಪಕರಾಗಿ ಮಂಗಳೂರು ವಿ ವಿಯ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದವರು.ಇವರ ಸಮಕಾಲೀನರಾಗಿದ್ದ ಪ್ರೊ.ನಾ ದಾಮೋದರ ಶಟ್ಟಿ,ಪ್ರೊ.ಸತ್ಯನಾರಾಯಣ ಮಲ್ಲಿ ಪಟ್ಟಣ ,ಡಾ.ನರಸಿಂಹ ಮೂರ್ತಿ ಹೀಗೆ ಹಲ ಹಿರಿಯ ಸಹ ಅಧ್ಯಾಪಕರ ಪ್ರೀತಿ ಗೌರವಗಳಿಗಳಿಗ ಪಾತ್ರರಾಗಿದ್ದವರು. ಇವರ ಸ್ನೇಹಶೀಲ ಗುಣ ಹಿರಿದಾದ್ದು.ಇವರ ಸಹವರ್ತಿ ಅಧ್ಯಾಪಕರಾಗಿದ್ದ ಪ್ರೊ.ಬಿಳಿಮಲೆ ಯವರು ಇವರನ್ನು ನನಗೆ ಮೊದಲು ಪರಿಚಯಿಸಿದವರು.ಈ ಪರಿಚಯ ನನ್ನನ್ನು ಶಿವಣ್ಣ ಅವರ ಕುಟುಂಬದ ಸದಸ್ಯನ ನೆಲೆಯಲ್ಲಿ ನಿಲ್ಲಿಸಿದ್ದು ಒಂದು ರೋಚಕ ಅನುಭವ. ಶಿವಣ್ಣ-ಸುಮಂಗಲ ದಂಪತಿಗಳು ಎಲ್ಲಾ ದಂಪತಿಗಳಂತೆ ಕೆಲವೊಮ್ಮೆ ಮುನಿಸಿಕೊಂಡು ವಿಭಾಗಕ್ಕೆ ಬರುವುದಿತ್ತು. ಇದು ನನಗೆ ಹೇಗೊ ಗೊತ್ತಾಗಿ ಹೋಗುತ್ತಿತ್ತು .ಕೇಳಿದ್ರೆ ಅಯ್ಯೋ ನಮ್ಮದು ಇದ್ದದ್ದೆ, ಗೊತ್ತಲ್ಲ ಸರ್ ಎಂದು ಮೇಡಂ ಹೇಳಿದ್ರೆ ಆ ನಿಮ್ಮ ಮೇಡಂ ಸುಮ್ಮಿಗೆ ಸ್ವಲ್ಪ ಸಮಾಧಾನ ಮಾಡಿ ಪೂವಪ್ಪರೆ ಎಂದು ಸರ್ ಹೇಳುವರು. ನಾನು ಸಂಧಾನಕಾರನಾಗಿ ಅವರನ್ನು ಸರೀಕರ ಮದುವೆಗಳಿಗೆ ಜೋಡಿಯಾಗಿ ಕಳುಹಿಸಿ ಖುಷಿ ಪಡುವ ಭಾಗ್ಯನನ್ನದಾಗಿದಾಗಿರುತ್ತಿತ್ತು. ಮಾತ್ರವಲ್ಲ ನಾನು ಅವರ ಬಂಧುಗಳ ಮದುವೆಗಳಲ್ಲಿ ಭಾಗಿಯಾಗಿದ್ದೇನೆ.ಇಂತಹ ಬೆಚ್ಚನೆಯ ಅನುಭವ ನಮ್ಮನ್ನು ಕೌಟುಂಬಿಕ ಬಂಧುತ್ವಕ್ಕೆ ಏರಿಸಿತ್ತು. ಮೊನೆ ಮೊನ್ನೆ ಯವರೆಗೆ ನಾವು ಮೈಸೂರಿನ ಶಿವಣ್ಣರ ಕುಟುಂಬದವರೊಂದಿಗೆ ಎರಡು ದಿನ ಇದ್ದು ಸಾಂಸ್ಕೃತಿಕ ಮೈಸೂರನ್ನು ಸುತ್ತಿ ಆನಂದಿಸುವ ಸುಖಕ್ಕೆ ಈಗ ಶಿವಣ್ಣರು ಹೊರತಾದ್ದು ನನಗೆ ವೈಯಕ್ತಿವಾಗಿ ದೊಡ್ಡ ನಷ್ಚವೆಂಬ ಅನುಭವಾಗುತ್ತಿದೆ.
ಶಿವಣ್ಣರ ಅಗಲಿಕೆ ಅವರ ಕುಟುಂಬಕ್ಕೆ ಅತೀವ ದು:ಖವನ್ನು ನೀಡಿದೆ.ಈ ಅಗಲಿಗೆಯ ನೋವನ್ನು ಧಾರಣೆ ಮಾಡುವ ಶಕ್ತಿ ಅವರಿಗೆ ಬರಲೆಂದು ಆಶಿಸುತ್ತೇನೆ.; ಅಗಲಿದ ನನ್ನ ಮಾರ್ಗದರ್ಶಿ ಮತ್ತು ಹಿತೈಶಿ ಆಗಿದ್ದ ಪ್ರೊ.ಎಂ.ಶಿವಣ್ಣ ನೆಲಮನೆಯವರಿಗೆ ಶ್ರದ್ಧಾಂಜಲಿಯನ್ನು ಈ ನುಡಿ ನಮನಗಳ ಮೂಲಕ ಸಲ್ಲಿಸುತ್ತೇನೆ. ಕೋವಿಡ್-19 ಕಾರಣವಾಗಿ ಅವರ ಕಾರ್ಯದಲ್ಲಿ ಭಾಗಿಯಾಗಲಾರದ ನೋವು ಬೇರೆ. ಕೊರೋನ ನಮ್ಮನ್ನು ಯಾವ ರೂಪಗಳಲ್ಲಿ ಕಾಡಲಿದೆಯೋ?
ಲೇಖನ: ಪೂವಪ್ಪ ಕಣಿಯೂರು