ನ್ಯೂಸ್ ನಾಟೌಟ್: ಲಾರಿಯಿಂದ ಕದ್ದು ಪೆಟ್ರೋಲ್ ಮಾರುವವರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಂದು ಕಳ್ಳರ ತಂಡ ವಿಮಾನಕ್ಕೆ ಬಳಸುವ ಭಾರಿ ಬೆಲೆಯ ಪೆಟ್ರೋಲ್ ಅನ್ನೇ ಕದ್ದು ಕಲಬೆರಕೆ ಮಾಡುತ್ತಿದ್ದ ಪ್ರಕರಣ ಇದೀಗ ಮಂಗಳೂರಿನಿಂದ ವರದಿಯಾಗಿದೆ.
ಸುರತ್ಕಲ್ ಬಳಿಯ ಬಾಳಾದಲ್ಲಿ ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೋಮವಾರ ಸಂಜೆ , ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಹಾಗೂ ಪೊಲೀಸರು ಒಟ್ಟೆಕಾಯರ್ ತಿರುವು ಬಳಿ ದಾಳಿ ನಡೆಸಿದಾಗ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಪತ್ತೆಯಾಗಿದೆ. ವಿಮಾನಕ್ಕೆ ಬಳಕೆ ಮಾಡುತ್ತಿದ್ದ ದುಬಾರಿ ಬೆಲೆಯ ಪೆಟ್ರೋಲ್ ಸರಬರಾಜು ಆಗುತ್ತಿದ್ದ ಎರಡು ಟ್ಯಾಂಕರ್ ಗಳಿಂದ ಪೆಟ್ರೋಲ್ ನ್ನು ಗುಪ್ತವಾಗಿ ನಿರ್ಮಿಸಿದ ಟ್ಯಾಂಕ್ ಗೆ ತುಂಬಿಸಿ ಬಳಿಕ ಟ್ಯಾಂಕರ್ ಗೆ ಸೀಮೆ ಎಣ್ಣೆ ಯನ್ನು ರಾಸಾಯನಿಕ ಮಿಶ್ರಣ ಮಾಡಿ ಕಲಬೆರಕೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಉಪನಿರ್ದೇಶಕರಾದ ಮಾಣಿಕ್ಯ, ಆಹಾರ ನಿರೀಕ್ಷರಾದ ಕೆ. ಪ್ರಮೋದ್ ಕುಮಾರ್ ಹಾಗೂ ಚರಣ್, ಪೊಲೀಸ್ ಸಬ್ಇನ್ಸ್ಪೆಕ್ಟರ್ ಪುನೀತ್ ಗಾವಂಕರ್ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.