ನ್ಯೂಸ್ ನಾಟೌಟ್: ಮುರುಘಾ ಮಠ ಶ್ರೀಗಳ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 694 ಪುಟಗಳ ಚಾರ್ಜ್ ಶೀಟ್ ನಲ್ಲಿ ಮಠದಲ್ಲಿ ನಡೆಯುತ್ತಿದೆ ಎನ್ನಲಾದ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಮುರುಘಾಶ್ರೀ , ಲೇಡಿ ವಾರ್ಡನ್ (ರಶ್ಮಿ), ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ ವಕೀಲ ಗಂಗಾಧರಯ್ಯ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇಲ್ಲ, ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುರುಘಾಶ್ರೀಗಳು ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮತ್ತು ಬರುವ ಔಷಧಿ ಬೆರೆಸಿದ ಸೇಬು, ಚಾಕಲೇಟ್ ನೀಡಿ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.
ಶ್ರೀಗಳ ಆಣತಿಯಂತೆ ಮಠದ ವಾರ್ಡನ್ ಶ್ರೀಗಳ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕಳುಹಿಸಿಕೊಡುತ್ತಿದ್ದರು. ಅಲ್ಲದೆ ಈ ವಿಚಾರ ಹೊರಗೆ ಬಾಯಿ ಬಿಡದಂತೆ ವಿದ್ಯಾರ್ಥಿನಿಯರಿಗೆ ಹೆದರಿಸುತ್ತಿದ್ದರು ಎನ್ನಲಾಗಿದೆ.
ಅಲ್ಲದೇ ಕೆಲ ವರ್ಷದ ಹಿಂದೆ ಓರ್ವ ಬಾಲಕಿಯ ರೇಪ್ ಅಂಡ್ ಮರ್ಡರ್ ಸಹ ಆಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದು, ಆಂಧ್ರ ಪ್ರದೇಶಕ್ಕೆ ತೆರಳಿದ್ದ ಪೊಲೀಸ್ ತಂಡ ಹಲವು ಮಾಹಿತಿಗಳನ್ನ ಕಲೆ ಹಾಕಿದೆ. ಮಠದ ಹಾಸ್ಟೆಲ್ ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಶ್ರೀಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.