ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಭೂಮಿಯೊಳಗಿನಿಂದ ವಿಚಿತ್ರ ಸದ್ದು ಕೇಳಿ ಬರುತ್ತಿದ್ದ ದಕ್ಷಿಣ ಕನ್ನಡ ಸಂಪಾಜೆ ಹಾಗೂ ಕೊಡಗು ಸಂಪಾಜೆ ಹಾಗೂ ಇನ್ನಿತರ ಕೆಲವು ಕಡೆಗಳಲ್ಲಿ ಇಂದು (ಭಾನುವಾರ) ತಡರಾತ್ರಿ ಗುಡುಗಿನ ರೀತಿಯಲ್ಲಿ ವಿಚಿತ್ರ ಸದ್ದು ಕೇಳಿ ಬಂದಿದೆ.
ಈ ಭಾರಿ ಸದ್ದಿಗೆ ಗೂನಡ್ಕ ಭಾಗದಲ್ಲಿ ಭೂಮಿ ನಡುಗಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ತಡರಾತ್ರಿ 1.45 ರ ಸುಮಾರಿಗೆ ವಿಚಿತ್ರ ಗುಡುಗು ಕೇಳಿಸಿದೆ. ಮೊದಲಿಗೆ ಭಾರಿ ಶಬ್ಧ ಕೇಳಿಸಿದೆ. ತದನಂತರ ಭೂಮಿ ಸಣ್ಣ ಗೆ ನಡುಗಿದ ಅನುಭವ ಆಗಿದೆಎಂದು ಸ್ಥಳೀಯರು ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಗುಡುಗಿನ ಸದ್ದು ನಾವೆಲ್ಲ ಕೇಳಿದ್ದೇವೆ. ಆದರೆ ತಡರಾತ್ರಿ ಕೇಳಿಸಿದ ಗುಡುಗಿನ ಸದ್ದು ಒಂದು ಸ್ಫೋಟದಂತೆ ಮೊದಲಿಗೆ ಕೇಳಿಸಿತು. ಸುಮಾರು 10 ಸೆಕೆಂಡಿಗೂ ಹೆಚ್ಚು ಗುಡುಗು ಸದ್ದು ಕೇಳಿ ಬಂದಿದ್ದು ವಿಶೇಷವಾಗಿತ್ತು. ಈ ವಿಚಿತ್ರ ಗುಡುಗಿನ ಸದ್ದಿಗೆ ಗಾಢ ನಿದ್ರೆಯಲ್ಲಿದ್ದ ಜನ ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಹಲವು ಸಲ ಕೊಡಗಿನ ಚೆಂಬು ಗ್ರಾಮ ಕೇಂದ್ರವಾಗಿದ್ದು ಭೂಕಂಪ ಆಗಿತ್ತು. ಇದರ ಕಂಪನದ ಅನುಭವ ಕೊಡಗಿನ ವಿವಿಧ ಕಡೆ ಹಾಗೂ ಸುಳ್ಯ ತಾಲೂಕಿನ ಹಲವು ಕಡೆ ಆಗಿತ್ತು. ಪ್ರಕೃತಿಯೊಡಲಿನ ವಿಚಿತ್ರ ಸದ್ದು ಕಳೆದ ಕೆಲವು ದಿನಗಳಿಂದ ಇರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಕೇಳಿ ಬಂದಿರುವುದು ಜನರ ನಿದ್ದೆಗೆಡಿಸಿದೆ.