ನ್ಯೂಸ್ ನಾಟೌಟ್ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರ ಮೇಲೆ ತಲ್ವಾರ್ ದಾಳಿ ಯತ್ನದ ಬೆನ್ನಲ್ಲೇ ಅವರಿಗೆ ಅಂಗ ರಕ್ಷಕರನ್ನು ನೀಡುವುದಕ್ಕೆ ಸರಕಾರ ನಿರ್ಧರಿಸಿದೆ. ಸ್ವತಃ ಈ ವಿಚಾರವನ್ನು ಹರೀಶ್ ಪೂಂಜಾ ಅವರೇ ಸ್ಪಷ್ಟಪಡಿಸಿದ್ದಾರೆ.
ಗುರುವಾರ ತಡರಾತ್ರಿ ಹರೀಶ್ ಪೂಂಜಾ ಅವರು ವಿಮಾನ ನಿಲ್ದಾಣದಿಂದ ತಮ್ಮ ಕಾರಿನಲ್ಲಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅವರ ಮೇಲೆ ತಲ್ವಾರ್ ದಾಳಿ ನಡೆಸುವ ಯತ್ನ ನಡೆಸಿದೆ. ಅದೃಷ್ಟವಷಾತ್ ಅವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸ್ವತಃ ಗೃಹ ಸಚಿವ ಅರಗ ಜ್ಞಾನೇಂದ್ರ ಹರೀಶ್ ಪೂಂಜಾ ಅವರಿಗೆ ಕರೆ ಮಾಡಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುತ್ತದೆ ಅನ್ನುವ ಭರವಸೆಯನ್ನು ನೀಡಿದ್ದಾರೆ ಎಂದು ಹರೀಶ್ ಪೂಂಜಾ ಮಾಧ್ಯಮದೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಯುಬ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಸಂಭವಿಸಿತ್ತು. ಇದಾದ ಕೆಲವು ದಿನಗಳಲ್ಲಿ ಮತ್ತೋರ್ವ ಹಿಂದೂ ನಾಯಕ ಜನಪ್ರಿಯ ಶಾಸಕರಿಗೆ ತಲ್ವಾರ್ ತೋರಿಸಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಜನನಾಯಕರಿಗೆ ಇಂತಹ ಪರಿಸ್ಥಿತಿ ಬಂದ್ರೆ ಸಾಮಾನ್ಯ ಕಾರ್ಯಕರ್ತನ ಪರಿಸ್ಥಿತಿ ಏನು ಎನ್ನುವುದನ್ನು ಕಾರ್ಯಕರ್ತರು ಇದೀಗ ಕೇಳುತ್ತಿದ್ದಾರೆ.