ನ್ಯೂಸ್ ನಾಟೌಟ್ : ಟ್ಯೂಷನ್ಗೆ ಬಂದಿದ್ದ ಬಾಲಕಿಗೆ, ಅಲ್ಲಿನ ಕೆಲಸಗಾರನೇ ಚಾಕೊಲೇಟ್ ಆಸೆ ತೋರಿಸಿ ಹೊರಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತದೇಹ ನೀರಿನ ಸಂಪ್ನಲ್ಲಿ ಪತ್ತೆಯಾಗಿದ್ದು, 50 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಮೈಸೂರು ಮೂಲದ ಆರೋಪಿ ಪಟ್ಟಣದ ಟ್ಯೂಷನ್ ಕೇಂದ್ರವೊಂದರಲ್ಲಿ 15 ವರ್ಷದಿಂದ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಿಗ್ಗೆ 11 ಗಂಟೆಯಲ್ಲಿ ಬಾಲಕಿಗೆ ಕರೆ ಮಾಡಿ ಟ್ಯೂಷನ್ಗೆ ಬರುವಂತೆ ತಿಳಿಸಿದ್ದ. ಬಂದಾಗ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಕರೆದೊಯ್ದು ಅತ್ಯಾಚಾರ ಎಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿ ಮೃತದೇಹವನ್ನು ಸಂಪ್ನಲ್ಲಿ ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಸಂಜೆಯಾದರೂ ಮಗಳು ಮನೆಗೆ ಬಾರದೆ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದರು. ಆರೋಪಿಯೂ ಅಮಾಯಕನಂತೆ ವರ್ತಿಸಿ ಬಾಲಕಿಯನ್ನು ಹುಡುಕಲು ಸಹಾಯ ಮಾಡಿದ್ದ. ಸಂಜೆ 5 ಗಂಟೆಗೆ ಮೃತದೇಹ ಪತ್ತೆಯಾದ ನಂತರ ತನಿಖೆ ಆರಂಭಿಸಿ, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮಾಲೀಕನ ವಿಚಾರಣೆ ನಡೆಸಲಾಯಿತು. ಶ್ವಾನದಳ ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿ ಸಿಕ್ಕಿಬಿದ್ದ. ಸಾಕ್ಷ್ಯಗಳಿದ್ದವು. ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿದ್ದರು.