ನ್ಯೂಸ್ ನಾಟೌಟ್: ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪ್ರಕಟಿಸಿದ್ದು ಹಿಜಾಬ್ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಾಗೂ ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠ ಬೆಳಗ್ಗೆ 10.30ಕ್ಕೆ ಐತಿಹಾಸಿಕ ತೀರ್ಪನ್ನು ಪ್ರಕಟಿಸಿತು. ಆದರೆ, ಇಬ್ಬರು ನ್ಯಾಯಾಧೀಶರು ತಮ್ಮ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಾರ್ಚ್ 15 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದು ಹೇಳುವ ಮೂಲಕ ಶಾಲಾ ಕಾಲೇಜುಗಳಲ್ಲಿ ಹಿಜಾಬ್ಅನ್ನು ನಿಷೇಧಿಸಿತ್ತು. ಕೋರ್ಟ್ ಹಾಲ್ ನಂ.6ರಲ್ಲಿ ಪ್ರಕರಣದ ತೀರ್ಪು ನೀಡಲಾಯಿತು. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದ್ದಾರೆ. ಇನ್ನೊಂದೆಡೆ, ಸುಧಾಂಶು ದುಲಿಯಾ ರಾಜ್ಯ ಸರ್ಕಾರ ನೀಡಿದ್ದ ಹಿಜಾಬ್ ಆದೇಶವನ್ನು ರದ್ದುಗೊಳಿದ್ದಾರೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿಭಜಿತ ತೀರ್ಪು ನೀಡಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಮತ್ತು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ 26 ಮೇಲ್ಮನವಿಗಳನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ವಜಾಗೊಳಿಸಿದ್ದಾರೆ. ಆದರೆ, ತಮ್ಮ ಅಭಿಪ್ರಾಯದಲ್ಲಿನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದ್ದಾರೆ.