ನ್ಯೂಸ್ ನಾಟೌಟ್ : ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮುಜಾಫರ್ನಗರದಲ್ಲಿ ಕರ್ವಾ ಚೌತ್ ವೇಳೆ ಹಿಂದೂ ಹೆಣ್ಣುಮಕ್ಕಳಿಗೆ ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳು ಬುಧವಾರ ಎಚ್ಚರಿಕೆ ನೀಡಿವೆ.
ಮಹಿಳೆಯರು ಗುರುವಾರ ಕರ್ವಾ ಚೌತ್ ಆಚರಣೆಗಾಗಿ ಉಪವಾಸ ಇರಲಿದ್ದಾರೆ. ಈ ಹಬ್ಬದ ಆಚರಣೆಗಾಗಿ ಹಿಂದೂ ಹೆಣ್ಣುಮಕ್ಕಳು ತಮ್ಮ ಕೈಗೆ ಮೆಹೆಂದಿ ಹಾಕಿಕೊಳ್ಳುವುದು ಸಂಪ್ರದಾಯ. ಹೆಚ್ಚಾಗಿ ಮುಸ್ಲಿಂ ಸಮುದಾಯದವರೇ ಹಿಂದೂಗಳಿಗೆ ಮೆಹೆಂದಿ ಹಾಕುತ್ತಾರೆ. ಹೀಗೆ ‘ಮೆಹೆಂದಿ ಹಾಕುವಾಗ, ಹಿಂದೂ ಹೆಣ್ಣುಮಕ್ಕಳಿಗೆ ಆಮಿಷಗಳನ್ನು ಒಡ್ಡಿ ಲವ್ ಜಿಹಾದ್ ಹಾಗೂ ಮತಾಂತರಕ್ಕಾಗಿ ಪ್ರೇರೇಪಿಸುತ್ತಾರೆ’ ಎಂದು ಈ ಸಂಘಟನೆಗಳು ಆರೋಪಿಸಿವೆ.
‘ಹಿಂದೂ ಹೆಣ್ಣುಮಕ್ಕಳು ಮೆಹೆಂದಿ ಹಾಕಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ 13 ಮೆಹೆಂದಿ ಹಾಕುವ ಅಂಗಡಿಗಳನ್ನು ತೆರೆದಿದ್ದೇವೆ. ನಮ್ಮ ಸೊಸೆ, ಹೆಣ್ಣುಮಕ್ಕಳಿಗೆ ಹಿಂದೂಗಳೇ ಈ ಅಂಗಡಿಗಳಲ್ಲಿ ಮೆಹೆಂದಿ ಹಾಕಲಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡ ಬುಧವಾರ ಹೇಳಿದರು. ‘ಜಿಲ್ಲೆಯಲ್ಲಿರುವ ಮಾರುಕಟ್ಟೆಗಳಲ್ಲಿ ನಮ್ಮ ಸಂಘಟನೆಯ ಹುಡುಗರು ಕಣ್ಗಾವಲಿದ್ದಾರೆ. ಮುಸ್ಲಿಂ ಸಮುದಾಯದವರು ಮೆಹೆಂದಿ ಹಾಕದಂತೆ ಅವರು ನೋಡಿಕೊಳ್ಳಲಿದ್ದಾರೆ. ನಾವು ಮುಸ್ಲಿಂ ಯುವಕರಿಗೆ ‘ಒಳ್ಳೆ ಬುದ್ಧಿ’ ಕಲಿಸುತ್ತೇವೆ’ ಎಂದರು. ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳು ನೀಡುವ ಎಚ್ಚರಿಕೆ ಬಗ್ಗೆ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳು ಹೇಳಿದರು.