ನ್ಯೂಸ್ ನಾಟೌಟ್: ಕಾಂತಾರ ಅನ್ನುವ ಹೆಸರು ಕೇಳಿದ್ರೆ ಸಾಕು ಆ ಸಿನಿಮಾ ನೋಡಿ ಬಂದವರ ಮೈಮನ ರೋಮಾಂಚನವಾಗುತ್ತದೆ. ಮೇಕಿಂಗ್ನಿಂದ ಹಿಡಿದು ಒಂದೊಂದು ಡೈಲಾಗ್ ನಲ್ಲೂ ಕಾಂತಾರ ಸಿನಿಮಾ ಜನರಿಗೆ ಮೋಡಿ ಮಾಡಿದೆ. ಭಕ್ತಿ ಭಾವದ ಪುಳಕವನ್ನುಂಟು ಮಾಡಿದೆ. ಅಷ್ಟಕ್ಕೂ ಕಾಂತರ ಅಂದ್ರೆ ಏನು ? ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವುದಕ್ಕೆ ಕಾರಣವಾದರೂ ಏನು? ಸಿನಿಮಾದಲ್ಲಿ ಪಂಜುರ್ಲಿ ದೈವದ ಶಕ್ತಿಯ ಅನಾವರಣ ಆಗಿದ್ದು ಹೇಗೆ? ಕರಾವಳಿ ಸುಪ್ರಸಿದ್ಧ ದೇವಸ್ಥಾನ ಧರ್ಮಸ್ಥಳಕ್ಕೂ ಪಂಜುರ್ಲಿ ದೈವಕ್ಕೂ ಇರುವ ಸಂಬಂಧ ಏನು? ಪಂಜುರ್ಲಿಯನ್ನು ಶಿವನೆ ಕೊಂದು ಮರು ಜೀವ ನೀಡಿದ್ದು ಹೇಗೆ? ಇದೆಲ್ಲದರ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..
ತುಳುನಾಡಿನ ಆರಾಧ್ಯ ದೈವಗಳಲ್ಲಿ ಪಂಜುರ್ಲಿ ದೈವವೂ ಕೂಡ ಒಂದಾಗಿದೆ. ಈ ದೈವಕ್ಕೆ ಅಪಾರ ಶಕ್ತಿ ಇದೆ. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಆಚರಣೆ ಮತ್ತು ಅದರ ಶಕ್ತಿಯ ಬಗ್ಗೆ ಹೇಳಲಾಗಿದೆ. ಪಂಜುರ್ಲಿ ದೈವದ ಹಿಂದೆ ರೋಚಕ ಕಥೆಯಿದೆ. ಪಂಜುರ್ಲಿ ಅಂದರೆ ಹಂದಿ. ಈ ಹಂದಿಯು ದೈವದ ಸ್ಥಾನ ಪಡೆದಿದ್ದು ಹೇಗೆ? ಕಾರಣಿಕ ಶಕ್ತಿಯಾಗಿ ಜನರ ನಂಬಿಕೆಯಾಗಿದ್ದು ಹೇಗೆ ಅನ್ನುವುದರ ಬಗೆಗಿನ ವಿವರವನ್ನು ಹೇಳ್ತಿವಿ ನೋಡಿ.
ಕರಾವಳಿ ಕರ್ನಾಟಕವನ್ನು ತುಳುನಾಡೆಂದು ಕರೆಯುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ತುಳುನಾಡಿಗೆ ಇಲ್ಲಿನ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆಯಿದೆ. ಇಲ್ಲಿನ ಜನರು ದೇವರಿಗಿಂತಲೂ ದೈವವನ್ನೇ ಹೆಚ್ಚು ನಂಬುತ್ತಾರೆ. ಅಂತಹ ದೈವಗಳಲ್ಲಿ ಕಾಂತಾರ ಸಿನಿಮಾದಲ್ಲಿ ತೋರಿಸಿದ ಪಂಜುರ್ಲಿ ದೈವವೂ ಒಂದು. ತುಳುವಿನಲ್ಲಿ ಪಂಜಿ ಅಂದ್ರೆ ಹಂದಿ ಅಂತ ಅರ್ಥ. ಕನ್ನಡದಲ್ಲಿ ಅದನ್ನು ಹಂದಿ ಅಂತೀವಿ. ಈಶ್ವರ ದೇವರ ಕೃಪೆಯಿಂದ ಹಂದಿ ದೈವವಾಗಿ ಭೂ ಲೋಕಕ್ಕೆ ಬರುತ್ತದೆ. ಅದು ಹೇಗೆ ಅನ್ನುವುದನ್ನು ಇಲ್ಲಿ ವಿವರವಾಗಿ ನೀಡಿದ್ದೀವಿ ನೋಡಿ.
ಕೈಲಾಸದಲ್ಲಿದ್ದ ಈಶ್ವರ ದೇವರು ಪಾರ್ವತಿ ದೇವಿಯ ಮಾತಿನ ಮೇರೆಗೆ ಒಂದು ಕಾಡು ಕಟ್ಟುತ್ತಾರೆ. ಆ ಕಾಡನ್ನು ದೇವರ ಕಾಡು ಎಂದೇ ಕರೆಯಲಾಗುತ್ತದೆ. ಆ ಕಾಡಿನಲ್ಲಿ ಒಂದು ದಿನ ಈಶ್ವರ ದೇವರು ಬೇಟೆಗೆಂದು ಹೋಗುತ್ತಾರೆ. ಹೀಗೆ ಹೋಗಿದ್ದಾಗ ಅವರಿಗೆ ಹಂದಿಗಳ ಹಿಂಡು ಕಾಣ ಸಿಗುತ್ತದೆ. ಆ ಹಂದಿಗಳಲ್ಲಿ ಒಂದನ್ನು ಗುರಿ ಹಿಡಿದು ಈಶ್ವರ ದೇವರು ಬಾಣ ಹಿಡಿದು ನಿಲ್ಲುತ್ತಾರೆ. ಆಗ ದೊಡ್ಡ ಹಂದಿಗಳೆಲ್ಲ ಓಡಿ ಹೋಗಿ ಪೊದೆಯಲ್ಲಿ ಅವಿತುಕೊಳ್ಳುತ್ತವೆ. ಸಣ್ಣ ..ಸಣ್ಣ ಹಂದಿ ಮರಿಗಳು ಅಲ್ಲೇ ನಿಂತಿರುತ್ತವೆ. ಹಂದಿ ಮರಿಗಳ ಆಟ ಕಂಡು ಈಶ್ವರ ದೇವರು ಬೇಟೆಯನ್ನೇ ಮರೆತು ಬಿಡುತ್ತಾರೆ. ಅದರಲ್ಲಿ ಒಂದು ಹಂದಿಯನ್ನು ಎತ್ತಿಕೊಂಡು ತಮ್ಮ ಅರಮನೆಗೆ ಕರೆದುಕೊಂಡು ಬರುತ್ತಾರೆ. ಅಲ್ಲಿ ಗೂಟದಲ್ಲಿ ಕಟ್ಟಿಹಾಕಿ ಅದನ್ನು ಚೆನ್ನಾಗಿ ಸಾಕುತ್ತಾರೆ. ಈಶ್ವರ -ಪಾರ್ವತಿಯ ಮುದ್ದಿನ ಕಣ್ಮಣಿಯಾಗಿ ಹಂದಿ ಅಲ್ಲಿ ದಷ್ಟಪುಷ್ಟವಾಗಿ ಬೆಳೆದು ನಿಲ್ಲುತ್ತದೆ.
ಹಂದಿಗೆ ಎಲ್ಲವೂ ಸಿಗುತ್ತದೆ. ಪಾರ್ವತಿಯೂ ಅದನ್ನು ಮಗುವಿನಂತೆ ಸಾಕುತ್ತಾರೆ. ಹಂದಿ ಬಲಿತು ಪ್ರಾಯಕ್ಕೆ ಬಂದಾಗ ಆ ಹಂದಿಗೆ ಅರಮನೆಯ ಮುಂದಿದ್ದ ಬಾಕಿಮಾರು ಗದ್ದೆಯಲ್ಲಿದ್ದ ಕೋಡಿ ಭತ್ತದ ಪರಿಮಳ ಮೂಗಿಗೆ ಬಡಿಯುತ್ತದೆ. ಸಂಪಾಗಿ ಬೆಳೆದ ಭತ್ತವನ್ನು ನೋಡಿ ಅದಕ್ಕೆ ತಡೆಯುವುದಕ್ಕೆ ಆಗಲಿಲ್ಲ. ಅಲ್ಲಿದ್ದ ಗೂಟವನ್ನು ಪುಡಿ ಮಾಡಿ ಬಾಕಿ ಮಾರು ಭತ್ತದ ಗದ್ದೆಗೆ ನುಗ್ಗುತ್ತದೆ. ಅಲ್ಲಿದ್ದ ಬೆಳೆಯನ್ನೆಲ್ಲ ತಿಂದು ತೇಗುತ್ತದೆ. ಉಳಿದ ಬೆಳೆಯನ್ನೂ ನಾಶ ಮಾಡುತ್ತದೆ. ಇದನ್ನು ನೋಡಿ ಪಾರ್ವತಿ ದೇವಿ ಆಘಾತಕ್ಕೆ ಒಳಗಾಗುತ್ತಾರೆ. ತಾವು ಪ್ರೀತಿಯಿಟ್ಟು ಬೆಳೆದ ಬಾಕಿಮಾರು ಗದ್ದೆಯ ಬೆಳೆಯನ್ನು ನಾವೇ ಇಷ್ಟಪಟ್ಟು ಮುದ್ದಾಗಿ ಸಾಕಿದ ಹಂದಿ ಹಾಳು ಮಾಡಿತ್ತಲ್ಲ ಎಂದು ಕಣ್ಣೀರಿಡುತ್ತಾರೆ. ಈಶ್ವರ ದೇವರಿಗೂ ಈ ವಿಷಯವನ್ನು ತಿಳಿಸಿ ಜೋರಾಗಿ ಅಳುತ್ತಾರೆ. ಸಿಟಿಗೆದ್ದ ಪರಶಿವ ಹಂದಿಗೆ ಬಾಣ ಬಿಡುತ್ತಾರೆ. ಹಂದಿ ನರಳಾಡುತ್ತಾ ಪ್ರಾಣ ಬಿಡುತ್ತದೆ. ಹಂದಿಯ ನರಳಾಟ ನೋಡಿ ಪಾರ್ವತಿಯ ಕೋಪ ಇಳಿದು ಹೋಗುತ್ತದೆ. ಹಂದಿಗೆ ಮರಳಿ ಜೀವ ನೀಡುವಂತೆ ಈಶ್ವರ ದೇವರ ಬಳಿ ಒತ್ತಾಯಿಸುತ್ತಾಳೆ. ಕೊನೆಗೂ ಹಂದಿಗೆ ಮರುಜೀವ ನೀಡಲಾಗುತ್ತದೆ. ಆಗ ಈಶ್ವರ ದೇವರ ಬಳಿ ಹಂದಿಯು, ನನಗೆ ಯಾಕೆ ಮರು ಜೀವ ನೀಡಿದ್ದೀರಿ ಎಂದು ಕೇಳುತ್ತದೆ? ಅದಕ್ಕೆ ಉತ್ತರಿಸಿದ ಈಶ್ವರ ದೇವರು ಭೂ ಲೋಕದಲ್ಲಿ ಅಧರ್ಮ ನಡೆಯುತ್ತಿದೆ. ನಂಬಿದ ಭಕ್ತರ ಕಷ್ಟಗಳನ್ನು ಪರಿಹರಿಸಬೇಕು. ದುಷ್ಟರಿಗೆ ಶಿಕ್ಷೆ ಕೊಡಬೇಕು. ಹೀಗಾಗಿ ನಿನ್ನನ್ನು ಮಾಯಾ ರೂಪದಲ್ಲಿ ಭೂ ಲೋಕಕ್ಕೆ ಕಳಿಸುವುದಾಗಿ, ಇಲ್ಲಿಂದ ನಿಂದ ಹೆಸರು ಗಣಮಣಿ ಎಂದು ಆಗುತ್ತದೆ. ನೀನು ಭೂಲೋಕಕ್ಕೆ ಹೋಗಿ ಧರ್ಮವನ್ನು ಉಳಿಸಬೇಕು ಎಂದು ವರ ಪ್ರಸಾದವನ್ನು ನೀಡಿ ಈಶ್ವರ ದೇವರು ಅನುಗ್ರಹಿಸುತ್ತಾರೆ.
ಈಶ್ವರ ದೇವರ ವರ ಪಡೆದ ಗಣಮಣಿ ಭೂಲೋಕದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿಳಿಯುತ್ತದೆ. ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿದ ಗಣಮಣಿ ಧರ್ಮಸ್ಥಳದಲ್ಲಿರುವ ನೆಲ್ಯಾಡಿ ಬೀಡಿಗೆ ಬರುತ್ತದೆ. ಅಲ್ಲಿ ವಾಸವಿದ್ದ ಅಮ್ಮು ಬಳ್ಳಾಲ್ತಿ ಎಂಬ ಮಹಿಳೆಯ ಪತಿಗೆ ಕಾಯಿಲೆ ಬಂದಿರುತ್ತದೆ. ಆಕೆ ಕಣ್ಣೀರು ಹಾಕುತ್ತಿದ್ದಾಗ ಅದನ್ನು ಗಣಮಣಿ ಕೇಳಿ ಪರಿಹರಿಸಿ ಕೊಡುವ ಭರವಸೆ ನೀಡುತ್ತಾನೆ. ಕೈಲಾಸದಿಂದ ತಂದ ಬೇರಿನ ಮೂಲಿಕೆಯಿಂದ ಅಮ್ಮು ಬಳ್ಳಾಲ್ತಿಯ ಗಂಡನ ರೋಗವನ್ನು ನಿವಾರಣೆ ಮಾಡುತ್ತಾರೆ. ಅಮ್ಮು ಬಳ್ಳಾಲ್ತಿಯ ಗಂಡ ಚೇತರಿಸಿಕೊಳ್ಳುತ್ತಾರೆ. ಆಗ ಸಂತೋಷಗೊಂಡ ಅಮ್ಮು ಬಳ್ಳಾಲ್ತಿ ನಿನ್ನ ಹೆಸರೇನು ಎಂದು ಗಣಮಣಿ ಬಳಿ ಕೇಳುತ್ತಾರೆ. ಆಗ ಗಣಮಣಿ ಈಶ್ವರ ದೇವರು ನನಗೆ ಗಣಮಣಿ ಎಂದು ಇಟ್ಟಿದ್ದಾರೆ. ಆದರೆ ಭೂಲೋಕದಲ್ಲಿ ಯಾರೂ ನನಗೆ ಹೆಸರಿಟ್ಟಿಲ್ಲ. ನೀವು ನನಗೆ ಭೂಲೋಕದಲ್ಲಿ ಅನ್ನ ನೀಡಿದ್ದೀರಿ. ತಂದೆ-ತಾಯಿಯ ರೂಪದಲ್ಲಿ ನೀವಿಬ್ಬರು ಇದ್ದೀರಿ. ಹೀಗಾಗಿ ನೀವು ನನ್ನನ್ನು ಅಣ್ಣಪ್ಪ ಎಂದು ಕರೆಯಬಹುದು ಎಂದು ಗಣಮಣಿ ಹೇಳುತ್ತದೆ. ಅಲ್ಲಿಂದ ಗಣಮಣಿಯ ಹೆಸರು ಅಣ್ಣಪ್ಪ ಪಂಜುರ್ಲಿ ಆಗುತ್ತೆ.
ಧರ್ಮ ಸ್ಥಳದಲ್ಲಿ ಈಗಲೂ ಕೂಡ ಅಣ್ಣಪ್ಪ ಪಂಜುರ್ಲಿಗೆ ಪ್ರಧಾನ ಸ್ಥಾನವಿದೆ. ಧರ್ಮಸ್ಥಳದಲ್ಲಿ ಮಂಜುನಾಥ ನೆಲೆಯಾಗಲು ಇದೇ ಅಣ್ಣಪ್ಪ ಪಂಜುರ್ಲಿಯ ಪ್ರೇರಣೆಯೇ ಕಾರಣ ಎನ್ನಲಾಗುತ್ತದೆ. ‘ಬಣ್ಣ ಬಂಗಾರ ವಜ್ರ ವೈಡೂರ್ಯ ಬಂದ್ರೆ ಅದು ಸ್ವಾಮಿ ಮಂಜುನಾಥನಿಗಿರಲಿ..ಹಿಡಿ ಕಾಣಿಕೆ ಬಂದರೆ ನನಗಿರಲಿ. ನಾನು ಎಪ್ಪತ್ತು ಮೆಟ್ಟಿಲು ಗಿರಿ ಏರಿ ನಿಲ್ಲುವೆ. ಧರ್ಮವನ್ನು ನಡೆಸಿಕೊಂಡು ಬನ್ನಿ’ ಅನ್ನುವ ವಾಕ್ಯವನ್ನು ಅಣ್ಣಪ್ಪ ಕೊಡುತ್ತಾನೆ. ಹೀಗಾಗಿ ಧರ್ಮಸ್ಥಳದಲ್ಲಿ ಎಪೆತ್ತು ಮೆಟ್ಟಿಲ ಮೇಲೆ ಅಣ್ಣಪ್ಪನಿಗೆ ಗುಡಿ ಕಟ್ಟಲಾಗಿದೆ. ಹೀಗೆ ಧರ್ಮಸ್ಥಳದಲ್ಲಿ ನೆಲೆಯಾದ ಪಂಜುರ್ಲಿ ದೈವ ಬೇರೆ ಬೇರೆ ಕಡೆ ಸಂಚಾರ ನಡೆಸಿ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ತುಳುನಾಡಿನಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಈ ಕಥೆ ಭಿನ್ನವಾಗಿದೆ. ಕಾಂತಾರ ಸಿನಿಮಾದಲ್ಲೂ ಪಂಜುರ್ಲಿಯ ಇಡೀ ಶಕ್ತಿಯ ಪರಿಚಯ ಮಾಡಲಾಗಿದೆ. ಅದರಲ್ಲಿರುವ ವರಾಹ ರೂಪಂ ಹಾಡನ್ನು ನೀವೆಲ್ಲ ಕೇಳಿರಬಹುದು. ವರಾಹ ರೂಪವೆಂದರೆ ಹಂದಿಯ ರೂಪವೆಂದು ಅರ್ಥ. ಒಟ್ಟಿನಲ್ಲಿ ಈ ಸಿನಿಮಾ ದೇಶ-ವಿದೇಶದ ಜನರ ಮನಸ್ಸನ್ನು ಗೆದ್ದಿದೆ. ಟಿಕೆಟ್ ಗಾಗಿ ಜನರು ಮುಗಿ ಬೀಳುತ್ತಿದ್ದಾರೆ ಅನ್ನುವುದು ವಿಶೇಷ.