ಸುಳ್ಯ: ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕೀಚಕ ಅಳಿಯನೊಬ್ಬ ತನ್ನ ಅತ್ತೆಯನ್ನೇ ಮನೆಯೊಳಗೆ ಕೂಡಿ ಹಾಕಿ ನಾಪತ್ತೆಯಾದ ಘಟನೆ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ?
ಸುಳ್ಯ ಪರಿಸರದಲ್ಲಿ ಬಳೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವ ರಾಜೇಶ್ವರಿ ಮತ್ತು ವಿನಯ ಕುಮಾರ್ ಅವರು ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಅವರಿಗೆ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.ಇದರಿಂದಾಗಿ ಕ್ವಾರಂಟೀನ್ ಆಗಬೇಕು ಎಂಬ ನಿಯಮ ಪಾಲಿಸಬೇಕೆಂಬ ಕಾರಣಕ್ಕೆ ಶನಿವಾರದಂದು ವೃದ್ಧೆಯನ್ನು ಮನೆಯೊಳಗೇ ಕೂಡಿಹಾಕಿ ಇಬ್ಬರೂ ಈಗ ನಾಪತ್ತೆಯಾಗಿದ್ದಾರೆ.
ಕಿರುಚಾಡಿದ ವೃದ್ಧೆ
ಭಾನುವಾರ ಮಧ್ಯಾಹ್ನದ ವೇಳೆ ಸ್ಥಳೀಯರಿಗೆ ಕೊಠಡಿಯ ಒಳಗಡೆಯಿಂದ ವೃದ್ಧೆ ಅಳುವ ಶಬ್ದ ಕೇಳಿತು. ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುಳ್ಯ ಠಾಣಾ ಎಸ್.ಐ.ಹರೀಶ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರಿದ್ದು ಬಾಗಿಲು ತೆರೆದು ವೃದ್ಧೆಯನ್ನು ಉಪಚರಿಸಿದ್ದಾರೆ. ಎರಡು ದಿನದಿಂದ ಉಪವಾಸದಲ್ಲಿದ್ದ ವೃದ್ಧೆಗೆ ಆಹಾರ- ನೀರಿನ ವ್ಯವಸ್ಥೆ ಮಾಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ನೇತೃತ್ವದಲ್ಲಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ನಾಪತ್ತೆಯಾದ ದಂಪತಿಗೆ ಮೊಬೈಲ್ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಎಲ್ಲಿಗೆ ಹೋಗಿದ್ದಾರೆಂದೂ ತಿಳಿದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.