ನ್ಯೂಸ್ ನಾಟೌಟ್ : ಕನ್ನಡ ಸಿನಿಮಾಗಳು ಇದೀಗ ಮತ್ತೊಮ್ಮೆ ದೇಶ -ವಿದೇಶದಲ್ಲಿ ಸುದ್ದಿ ಮಾಡುತ್ತಿವೆ. ಈ ಹಿಂದೆ ಕೆಜಿಎಫ್ ಸಿನಿಮಾ ಭಾರಿ ಸದ್ದು ಮಾಡಿತ್ತು. ಕನ್ನಡಕ್ಕೆ ಕನ್ನಡ ಭಾಷೆಗೆ ಗೌರವ ತಂದುಕೊಟ್ಟಿತ್ತು. ಕೋಟ್ಯಂತರ ರೂ. ಹಣಗಳಿಕೆ ಮಾಡಿ ಇಡೀ ಸಿನಿಮಾ ಇಂಡಸ್ಟ್ರಿ ದಕ್ಷಿಣದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಆದಾಯ ಗಳಿಕೆಯಲ್ಲಿ ಅತಿವೇಗವಾಗಿ ೨೫ ಕೋಟಿ ರು. ಹಣ ಗಳಿಕೆ ಮಾಡುವ ಮೂಲಕ ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾ ಹಿಂದಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ.
ಕೆಜಿಎಫ್ ಆಗಿರಲಿ ಅಥವಾ ವಿಕ್ರಾಂತ್ ರೋಣ ಆಗಿರಲಿ ಆರಂಭದಲ್ಲಿ ಹೆಚ್ಚು ಹಣದ ಗಳಿಕೆ ಮಾಡಿರಲಿಲ್ಲ. ಈ ಸಿನಿಮಾಗಳು ನಿಧಾನವಾಗಿ ತಮ್ಮ ಹಣದ ಗಳಿಕೆಯನ್ನು ಏರಿಸಿಕೊಂಡಿದ್ದವು. ಆದರೆ ಕಾಂತಾರ ಸಿನಿಮಾ ಬಿಡುಗಡೆ ಗೊಂಡ ಮೊದಲ ದಿನವೇ ಆರು ಕೋಟಿ ರು. ಆದಾಯ ಗಳಿಸಿದೆ. ಎರಡನೇ ದಿನ ಎಂಟು ಕೋಟಿ ಆದಾಯ ಪಡೆದುಕೊಂಡಿದೆ. ಸದ್ಯ ಐದು ದಿನದಲ್ಲಿ ಒಟ್ಟು 25 ಕೋಟಿ ರು. ಪಡೆದುಕೊಂಡಿರುವುದು ವಿಶೇಷವಾಗಿದೆ. ಸದ್ಯ ಕಾಂತಾರ ಸಿನಿಮಾ ನೋಡುವುದಕ್ಕಾಗಿ ಜನ ಮುಗಿ ಬೀಳುತ್ತಿದ್ದು ಎಲ್ಲ ಚಿತ್ರ ಮಂದಿರಗಳಲ್ಲಿ ಬಿರುಸಿನ ಪ್ರದರ್ಶನ ಕಾಣುತ್ತಿವೆ. ಈ ಬಗ್ಗೆ ರಿಷಭ್ ಶೆಟ್ಟಿ ಮತ್ತು ತಂಡ ಫುಲ್ ಖುಷಿಯಾಗಿದೆ.
ಕಾಂತಾರ” ಸಿನಿಮಾ, ತುಳುನಾಡಿನ ಭೂತಕಾಲದ, “ಭೂತ” ನಂಬಿದವರ, ನಂಬದವರ, ಕಾಡು ದೋಚುವವರ, ದೋಚುವ ಕಾಡನ್ನು ರಕ್ಷಿಸುವವರ ಕತೆಯನ್ನು ಹೇಳುತ್ತಲೇ ನಮ್ಮನ್ನು ಅಚ್ಚರಿಯಾಗಿಸುವ, ತುಳುನಾಡಿನ ಆ ದಿನಗಳ ಉಳ್ಳವರ ಕ್ರೌರ್ಯ, ಇಲ್ಲದವರ ಅಸಹಾಯಕತೆ ಎಲ್ಲವನ್ನೂ ಹಿರಿಯ ಜೀವವೊಂದು ಮಡಿಲಲ್ಲಿ ಕೂರಿಸಿ ಕತೆ ಹೇಳುವ ಹಾಗೆ ಹೇಳುತ್ತಲೇ ಹೋಗುತ್ತದೆ. ಕೊನೆಗೆ ಶಿವ ದೈವವಾಗಿ ಅರಣ್ಯಾಧಿಕಾರಿ ಮುರುಳಿಗೆ ಕೊಡುವ ಅಭಯವಿದೆಯಲ್ಲವಾ “ಆ ಅಭಯದಲ್ಲಿ ನೀನು ಕಾಡನ್ನು,ಇಲ್ಲಿ ಬದುಕುವ ಜನರನ್ನು ಇನ್ನಷ್ಟು ಕಾಪಾಡು, ನಾ ನಿನ್ನ ಜೊತೆಗಿರುವೆ” ಎಂದು ಕಣ್ಣಲ್ಲೇ ಹೇಳಿದಂತೆ ವಿವರಿಸುವ ಕಥೆ ಕೊನೆಯ ಇಪ್ಪತ್ತು ನಿಮಿಷದಲ್ಲಿ ಅನೇಕ ಟ್ವಿಸ್ಟ್ ಗಳನ್ನು ಹೊಂದಿದ್ದು ವೀಕ್ಷಕರು ಹೆಚ್ಚು ಇಷ್ಟಪಟ್ಟಿದ್ದಾರೆ.