ನ್ಯೂಸ್ ನಾಟೌಟ್: ‘ಕನ್ನಡ ಭಾಷೆಯನ್ನು ಅರೆದು ನಯಗೊಳಿಸಿದ ಭಾಷೆ’ ಎಂದೇ ಬಣ್ಣಿಸಲ್ಪಟ್ಟ, ಆಡುಮಾತು ಹಾಗೂ ಆಚರಣೆಯಲ್ಲಿ ಹಾಸು ಹೊಕ್ಕಿರುವ ‘ಅರೆಭಾಷೆ’ಯ ಪದಕೋಶದಲ್ಲಿ 18 ಸಾವಿರ ಪದಗಳನ್ನು ದಾಖಲಿಸಲಾಗಿದೆ.
ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ವ್ಯಾಪ್ತಿಯಲ್ಲಿ ಅರೆಭಾಷೆ ಬಳಕೆಯಲ್ಲಿದ್ದು, ದ್ರಾವಿಡ ಭಾಷೆಗಳ ಪರಿವಾರಕ್ಕೆ ಸೇರಿದೆ ಎಂಬುದನ್ನು ಭಾಷಾ ವಿಜ್ಞಾನಿಗಳು ದಾಖಲಿಸಿದ್ದಾರೆ. ಈ ಅರೆಭಾಷಿಕ ಪದಗಳು ಜನರ ಮಾತುಕತೆಗಳು ಅಳಿವಿನಂಚಿನಲ್ಲಿವೆ. ಅಂತಹ ಪದಗಳನ್ನು ಸಂಗ್ರಹಿಸಿ ಅವುಗಳ ಮೂಲ, ಪದನಿಷ್ಪತ್ತಿ, ಸಮಾನಾರ್ಥಗಳು ಮತ್ತು ಜ್ಞಾತಿ ಪದಗಳನ್ನು ನೀಡುವ ಕಾರ್ಯವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಡಿದೆ ಎಂದು ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಉಲ್ಲೇಖಿಸಿದ್ದಾರೆ.
ತುಳುವಿನಂತೆ ಲೆಕ್ಷಿಕನ್ ಮಾದರಿಯಲ್ಲಿ ಅರೆಭಾಷೆ ಪದಕೋಶ(ಅರೆಭಾಷೆ, ಕನ್ನಡ, ಇಂಗ್ಲಿಷ್ ಡಿಕ್ಷನರಿ) ತಯಾರಿ ಮಾಡಬೇಕೆಂದು 2019 ಅಕ್ಟೋಬರ್ನಲ್ಲಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ನೇತೃತ್ವದಲ್ಲಿ ಚರ್ಚೆಯಾಯಿತು. ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡರ ಸಲಹೆಯಂತೆ ಅರೆಭಾಷೆ ವಿದ್ವಾಂಸರ ಸಭೆ ಮಾಡಿ ಸಂಶೋಧನಾ ಸಹಾಯಕರಿಂದ ಕ್ಷೇತ್ರಕಾರ್ಯ ಮಾಡಿಸಿ ಪದ ಸಂಗ್ರಹ ಮಾಡಲಾಯಿತು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚೆ. ರಾಮಸ್ವಾಮಿ ಮಾರ್ಗದರ್ಶನದಲ್ಲಿ 2020 ನವೆಂಬರ್ನಲ್ಲಿ ಅರೆಭಾಷೆ ಪದಕೋಶ ರಚನೆಗೆ ಪೂರ್ವ ತಯಾರಿ ಸಭೆ ಮತ್ತು ಪದಕೋಶ ತಯಾರಿ ಕಮ್ಮಟವನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ 8 ಮಂದಿ ಸಂಶೋಧನಾ ಸಹಾಯಕರು ಸತತ ನಾಲ್ಕು ವಾರಗಳಲ್ಲಿ 14 ಸಾವಿರ ಪದಗಳನ್ನು ಸಂಗ್ರಹಿಸಿಕೊಟ್ಟರು. ಈಗಾಗಲೇ ಪ್ರಕಟವಾದ ಕೆ.ಆರ್. ಗಂಗಾಧರ ಅವರ ಅರೆಭಾಷೆ, ಕನ್ನಡ, ಇಂಗ್ಲಿಷ್ ಶಬ್ದಕೋಶ, ಹಲವಾರು ಸಂಶೋಧನೆ ಮತ್ತು ಪ್ರಕಟಿತ ಪುಸ್ತಗಳಿಂದ ಪದಗಳನ್ನು ಸಂಪಾದಿಸಿ 18 ಸಾವಿರ ಪದಗಳನ್ನು ಅರೆಭಾಷೆ ಪದಕೋಶದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು.