ನ್ಯೂಸ್ ನಾಟೌಟ್ : ತರಗತಿ ಮುಗಿಸಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಕೈ ಹಿಡಿದು ಎಳೆದ ಕೊಕ್ಕಡದ ವ್ಯಕ್ತಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
೨೦೧೯ರಲ್ಲಿ ಕೊಕ್ಕಡದ ಪದ್ಮನಾಭ ಎಂಬಾತ ಆಗಸ್ಟ್ ೧೭ರಂದು ತರಗತಿ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಿದ್ದಾನೆ. ಈತನ ಕೈಯಿಂದ ತಪ್ಪಿಸಿಕೊಂಡ ಬಾಲಕಿ ಹತ್ತಿರದ ಸ್ನೇಹಿತೆ ಮನೆಗೆ ಹೋಗಿ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದಳು. ಈ ವೇಳೆ ಪದ್ಮನಾಭ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಬಾಲಕಿಯ ತಂದೆಗೂ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಧರ್ಮ ಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತನನ್ನು ಬಂಧಿಸಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಆತನನ್ನು ಪೋಕ್ಸೋ ಕಾಯ್ದೆ ಕಲಂ ೧೨ರ ಅಡಿಯಲ್ಲಿ ಅಪರಾಧಕ್ಕೆ ೩ ವರ್ಷ ಸಾಧಾರಣ ಶಿಕ್ಷೆ ಮತ್ತು ದಂಡ , ಐಪಿಸಿ ೩೫೪ (ಡಿ), ಅಡಿಯಲ್ಲಿ ೩ ವರ್ಷ ಜೈಲು ಶಿಕ್ಷೆ ಮತ್ತು ದಂಡ ಮತ್ತು ಐಪಿಸಿ ೩೪೧ ಅಡಿಯಲ್ಲಿ ಅಪರಾಧಕ್ಕಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.