ನ್ಯೂಸ್ ನಾಟೌಟ್ : ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಕೋರಿ ಹಾಕಿದ್ದ ಬ್ಯಾನರ್ ಹಾಗೂ ಫ್ರೇಮ್ ಅನ್ನು ಕದ್ದುಕೊಂಡು ಹೋಗಿ ಅವಮಾನ ಮಾಡಿದ ದುಷ್ಕರ್ಮಿಗಳು ಇದೀಗ ಅದೇ ಬ್ಯಾನರ್ ಅನ್ನು ರಾತ್ರೋ ರಾತ್ರಿ ತಂದು ಮೊದಲಿದ್ದ ಜಾಗದ ಪಕ್ಕದ ಬಸ್ ಸ್ಟ್ಯಾಂಡ್ ನಲ್ಲಿ ಎಸೆದು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಎಂಬಲ್ಲಿ ನಡೆದಿದೆ.
ಇತ್ತೀಚಿಗೆ ಧರ್ಮದರ್ಶಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಈ ಸಂದರ್ಭದಲ್ಲಿ ಉಪ್ಪಾರ ಬಳಿಕೆಯ ಶ್ರದ್ಧಾ ಗೆಳೆಯರ ಬಳಗದಿಂದ ಹೆಗ್ಗಡೆಯವರನ್ನು ಅಭಿನಂದಿಸಿ ಫ್ರೇಮ್ ಸಹಿತ ದೊಡ್ಡ ಬ್ಯಾನರ್ ಅನ್ನು ಉಪ್ಪಾರಪಳಿಕೆ ಎಂಬಲ್ಲಿ ಹಾಕಿದ್ದರು. ಆದರೆ ಐದು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಅದನ್ನು ಅಲ್ಲಿಂದ ಕದ್ದು ತೆಗೆದುಕೊಂಡು ಹೋಗಿದ್ದರು. ಬೆನ್ನಲ್ಲೇ ದುಷ್ಕರ್ಮಿಗಳನ್ನು ಸ್ವಾಮಿ ಮಂಜುನಾಥನೇ ನೋಡಿಕೊಳ್ಳಲಿ ಎನ್ನುವ ಪೋಸ್ಟ್ ವೊಂದು ವೈರಲ್ ಆಗಿತ್ತು. ಈ ಬೆನ್ನಲ್ಲೇ ಹಾನಿಗೊಂಡ ಸ್ಥಿತಿಯಲ್ಲಿ ಬ್ಯಾನರ್ ಅನ್ನು ತಂದು ಬಸ್ ಸ್ಟ್ಯಾಂಡ್ ನಲ್ಲಿ ಇಡಲಾಗಿದ್ದು ಹೆದರಿ ವಾಪಸ್ ತಂದು ಇಟ್ಟು ಹೋಗಿದ್ದಾರೆ ಎನ್ನಲಾಗಿದೆ.