ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದೆ. ಅದೂ ತಾಲಿಬಾನ್ ನಲ್ಲಿ ಕಾಣಿಸಿಕೊಂಡಿರುವ ಐಸಿಸ್ ಉಗ್ರರು ಇದೀಗ ರಾಜ್ಯದ ಒಳಗೂ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಆತಂಕಕಾರಿ ಬೆಳವಣಿಗೆ ನಡೆದೇ ಬಿಟ್ಟಿದೆ. ಈಗಾಗಲೇ ಶಿವಮೊಗ್ಗದಲ್ಲಿ ಇಬ್ಬರ ಉಗ್ರರ ಹೆಡೆಮುರಿ ಕಟ್ಟಲಾಗಿದೆ. ಬೆನ್ನಲ್ಲೇ ಮಂಗಳೂರಿನಲ್ಲಿಯೂ ಎನ್ಐಎ (ರಾಷ್ಟ್ರೀಯ ತನಿಖಾ ದಳ) ಕೂಡ ತೀವ್ರ ಶೋಧ ನಡೆಸಿದೆ. ಭಯೋತ್ಪಾದನೆಗೆ ಮಂಗಳೂರಿನಿಂದ ಕುಮ್ಮಕ್ಕು ಕೊಡುತ್ತಿದ್ದರಾ? ಅನ್ನುವುದರ ಅನುಮಾನದ ಮೇರೆಗೆ ಎನ್ಐಎ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗದಲ್ಲಿ ಸೆರೆಯಾಗಿರುವ ಉಗ್ರರ ಪೈಕಿ ಓರ್ವ ಮಂಗಳೂರಿನವ. ಈತನನ್ನು ಇದೀಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಈತ ಕೆಲವೊಂದು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮಹತ್ವದ ಎನ್ಐಎ ದಾಳಿ ಗುರುವಾರ ಬೆಳ್ಳಂ ಬೆಳಗ್ಗೆ ನಡೆದಿದೆ ಎಂದೂ ಹೇಳಲಾಗುತ್ತಿದೆ. ಬಂಧಿತ ಉಗ್ರ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಸುಲ್ತಾನ್ ಕಟ್ಟೆ, ಅಗ್ರಹಾರ ಎಂಬಲ್ಲಿಗೆ ಕರೆದೊಯ್ದಿದ್ದು ಸ್ಫೋಟಕ ಇದೆಯೇ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ಈತನ ಕರೆದುಕೊಂಡು ಮಂಗಳೂರಿನ ಹಲವು ಕಡೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಕರಾವಳಿ ಬಿಜೆಪಿ ಭದ್ರ ಕೋಟೆ. ಹಿಂದುತ್ವ ಬಲವಾಗಿ ಬೇರೂರಿರುವ ನೆಲೆವೀಡು. ಇಂತಹ ಪ್ರದೇಶದಲ್ಲಿ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನಕ್ಕೆ ಕೆಲವು ದುಷ್ಕ ಶಕ್ತಿಗಳು ಆಗಾಗ್ಗೆ ಪ್ರಯತ್ನ ನಡೆಸುತ್ತಿವೆ. ಈ ಪ್ರಯತ್ನದ ಫಲವಾಗಿಯೇ ಉಗ್ರರ ಕಾರ್ಯಾಚರಣೆಗಳು ಸದ್ದಿಲ್ಲದೆ ನಡೆಯುತ್ತಿವೆಯೇ ಅನ್ನುವಂತಹ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಇದೆಲ್ಲವನ್ನೂ ನೋಡುತ್ತಿದ್ದರೆ ಕರಾವಳಿಯಲ್ಲಿ ಉಗ್ರರು ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ರಾ ಅನ್ನುವ ಅನುಮಾನ ಹೆಚ್ಚಾಗುತ್ತಿದೆ.