ನ್ಯೂಸ್ ನಾಟೌಟ್ : ಉಪ್ಪಿನಂಗಡಿ ಸಮೀಪದ ಪಂಜಳ ಎಂಬಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಭಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಮೊಸಳೆಗಳು ಕಂಡು ಬಂದಿದೆ ಎಂದು ಸ್ದಳೀಯರು ತಿಳಿಸಿದ್ದಾರೆ.
2 ವಾರದ ಹಿಂದೆ ಇಲ್ಲಿಯ ಪೆಟ್ರೋಲ್ ಪಂಪ್ವೊಂದರ ಬಳಿಯ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಪತ್ತೆಯಾಗಿದ್ದವು . ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ಕುರುಚಲು ಹುಲ್ಲನ್ನು ಹೊಂದಿರುವ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ಕಂಡು ಬಂದಿದ್ದು, ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದಿಂದ ಕೂಡಿದೆ.
ನೇತ್ರಾವತಿ ನದಿಯಲ್ಲಿ ಹಲವರು ಮೀನು ಹಿಡಿಯುವುದು, ಗಾಳ ಹಾಕುವುದಕ್ಕೆ ತೆರಳುತ್ತಾರೆ. ಇಂತಹವರು ಎಚ್ಚರಿಕೆಯಿಂದ ಇರಬೇಕಾದ ಅಗತ್ಯ ಇದೆ. ನೇತ್ರಾವತಿ ನದಿ ತೀರದ ಹಳೆಗೇಟು ಬಳಿ ಈಗಾಗಲೇ ಅಲೆಮಾರಿಗಳು ಬಿಡಾರ ಹೂಡಿದ್ದು, ಅವರು ಎಲ್ಲದಕ್ಕೂ ನದಿಯನ್ನೇ ಆಶ್ರಯಿಸಿದ್ದಾರೆ. ಇದೇ ನದಿಯಲ್ಲಿ ಈಗ ಮೊಸಳೆಗಳು ಕಂಡು ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.