ನ್ಯೂಸ್ ನಾಟೌಟ್ : ಇದೊಂದು ಹಾರಾರ್ ಸಿನಿಮಾದ ಕಥೆ. ಕೊನೆತನಕ ಓದಿದ್ರೆ ಜಗತ್ತಿನ ಒಂದು ದೊಡ್ಡ ಅಚ್ಚರಿಯ ಕಂಡು ಹೀಗೂ ಉಂಟೆ ಎಂದು ನೀವೂ ಬೆರಗಾಗುತ್ತೀರಿ..! ಗೆಜ್ಜೆಯ ಸದ್ದು, ಮೋಹಿನಿ ದೆವ್ವದ ಕಾಟ, ಓರ್ವ ಅಪ್ರಾಪ್ತ ಹುಡುಗನ ಹೇಗೆ ಕಾಡಿಸಿತು ಅನ್ನುವುದು ಈ ಸ್ಟೋರಿಯಲ್ಲಿ ನಾವ್ ಹೇಳ್ತಿವಿ ಓದಿ..
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದ ಅಪ್ರಾಪ್ತ ಹುಡುಗನೊಬ್ಬ ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದ. ತಡರಾತ್ರಿ ತನಕ ಪಠ್ಯ ಪುಸ್ತಕ ಹಿಡಿದು ಓದುವುದು ಈತನಿಗೆ ರೂಢಿಯಿಂದ ಬಂದಿದ್ದು. ಇತ್ತೀಚೆಗೆ ಎಂದಿನಂತೆ ಹಾಸ್ಟೆಲ್ ನ ಕೊಠಡಿಯೊಳಗೆ ತಡರಾತ್ರಿ ಕುಳಿತು ಕಷ್ಟಪಟ್ಟು ಓದುತ್ತಿದ್ದ. ಈ ಸಂದರ್ಭದಲ್ಲಿ ಹೊರಗಿನಿಂದ ಗೆಜ್ಜೆಯ ಸದ್ದು ಝಲ್ …ಝಲ್ ಎಂದು ಕೇಳಿಸಲು ಶುರುವಾಯಿತು. ಹುಡುಗ ಗಾಬರಿಗೊಂಡ, ಮೈಯಿ ಒದ್ದೆಯಾಯಿತು. ಗಾಬರಿಯಿಂದ ದಢಕ್ ಎಂದು ಎದ್ದ ಹುಡುಗ ಮೊಬೈಲ್ ಹಿಡಿದು ಗೆಜ್ಜೆಯ ವಾಯ್ಸ್ ರೆಕಾರ್ಡ್ ಮಾಡಿಕೊಂಡ. ಗೆಜ್ಜೆಯ ಸದ್ದು ರಾತ್ರಿಯಿಡೀ ಆತನ ನಿದ್ದೆಗೆಡಿಸಿತು. ಮರುದಿನ ಹುಡುಗನಿಗೆ ವಿಪರೀತ ಜ್ವರ. ವಿಚಾರಿಸುವುದಕ್ಕೆ ಬಂದ ವಾರ್ಡನ್ ಗೆ ನಡೆದ ಎಲ್ಲ ವಿಚಾರಗಳನ್ನೂ ಸವಿವರವಾಗಿ ಹೇಳಿದ್ದಾನೆ.
ಹುಡುಗನ ಮುಖದಲ್ಲಿದ್ದ ಭಯ, ಮೈಯಲ್ಲಿ ಕಾವೇರಿದ್ದ ಜ್ವರ ಕಂಡು ಸ್ವತಃ ವಾರ್ಡನ್ ಕೂಡ ತಣ್ಣಗಾಗಿ ಹೋಗಿದ್ದ. ನನಗೂ ಈ ವಿಚಾರ ಗಮನಕ್ಕೆ ಬಂದಿದೆ. ತಡರಾತ್ರಿ ಆದರೆ ಹಾಸ್ಟೆಲ್ ಸುತ್ತಮುತ್ತ ಗೆಜ್ಜೆ ಸದ್ದು ಕೇಳಿಸುತ್ತದೆ. ಈ ವಿಚಾರವನ್ನು ಯಾರಿಗೂ ಹೇಳಬೇಡ. ಇತರ ವಿದ್ಯಾರ್ಥಿಗಳು ಕೂಡ ಭಯ ಪಟ್ಟುಕೊಳ್ಳುತ್ತಾರೆ ಎಂದು ಸಲಹೆ ನೀಡಿದ. ಮನಸ್ಸಿಲ್ಲದ ಮನಸ್ಸಿನಲ್ಲಿ ತಲೆ ಆಡಿಸಿದ ಕೊಕ್ಕಡದ ಹುಡುಗನ ಜ್ವರ ನೆತ್ತಿಗೇರಿತು. ಇನ್ನು ಇಲ್ಲಿದ್ದರೆ ಆಗುವುದಿಲ್ಲ ಎಂದು ಗಂಟುಮೂಟೆ ಕಟ್ಟಿಕೊಂಡು ತನ್ನ ಮನೆ ಉಪ್ಪಾರಪಳಿಕೆಯತ್ತ ಹುಡುಗ ಹೆಜ್ಜೆ ಹಾಕಿದ. ಮನೆಗೆ ಬಂದವನು ಮನೆಯವರ ಆರೈಕೆಯಿಂದ ಚೇತರಿಸಿದ. ಈ ವೇಳೆ ಹಾಸ್ಟೆಲ್ ನಲ್ಲಿ ಕೇಳಿಸಿದ್ದ ಮೋಹಿನಿ ದೆವ್ವದ ಗೆಜ್ಜೆ ಸದ್ದು ಮಾತ್ರ ಆತನ ಎದೆಯೊಳಗೆ ಮತ್ತೆ…ಮತ್ತೆ ರಿಂಗಣಿಸುತ್ತಲೇ ಇತ್ತು..
ಬಾಲಕ ಮನೆಗೆ ಬಂದರೂ ಅದೇ ಸದ್ದು ತಡರಾತ್ರಿ ಕೇಳಿಸಲು ಶುರುವಾಯಿತು. ಇವರ ಮನೆಯಲ್ಲಿ ಮಾತ್ರವಲ್ಲ ಇವರ ಹತ್ತಿರದ ಸಂಬಂಧಿಯ ಮನೆಯ ಹೊರಗಿನಿಂದಲೂ ಗೆಜ್ಜೆಯ ಸದ್ದು ರಾತ್ರಿ ಕೇಳಿಸಲು ಶುರುವಾಯಿತು. ಇದ್ಯಾವುದೋ ಮೋಹಿನಿ ದೆವ್ವ ಇರಬೇಕೆಂದು ಮನೆಯವರು ಆತಂಕಗೊಂಡರು. ಗಾಬರಿಯಿಂದ ಎದ್ದವರೇ ಮತ್ತೆ ಟಾರ್ಚ್ ಹಿಡಿದು ಹೊರಗಡೆ ಕಣ್ಣು ಹಾಯಿಸಿದರು. ಏನೂ ಕಾಣಿಸಲಿಲ್ಲ. ಆದರೆ ಮನೆಯ ಹಿಂದಿನ ಗೋಡೆಯ ಹಿಂದೆ ಒಂದು ಮಿಡತೆ (ಹುಳು) ಕಾಣಿಸಿತು. ಇದು ಇವರನ್ನೇ ನೋಡಿ ಗಹಗಹಿಸಿ ನಗುವಂತೆ ಕಂಡಿತು. ಏಕೆಂದರೆ ಇಷ್ಟು ದಿನ ಸದ್ದು ಮಾಡಿದ್ದು ಯಾವುದೋ ಮೋಹಿನಿ ದೆವ್ವವಲ್ಲ. ಇದು ಮಿಡತೆ ಎನ್ನುವುದು ಮನೆಯವರಿಗೆ ಆಗ ಸ್ಪಷ್ಟವಾಯಿತು.
ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ನಸುನಕ್ಕು ಎಲ್ಲರೂ ಸಮಾಧಾನ ಪಟ್ಟುಕೊಂಡರು. ಜ್ವರ ಒಂದ ಹುಡುಗನಿಗೂ ಅಯ್ಯೋ ನಾನೊಂದು ಸಣ್ಣ ಕೀಟಕ್ಕೆ ಇಷ್ಟೊಂದು ಹೆದರಿದ್ದಾ ಎಂದು ನಿಟ್ಟುಸಿರು ಬಿಟ್ಟ. ಒಟ್ಟಿನಲ್ಲಿ ಮೋಹಿನಿ ಕೀಟದ ಗೆಜ್ಜೆ ಸದ್ದು ಪ್ರಕರಣ ಅಲ್ಲಿಗೆ ಸುಖಾಂತ್ಯ ಕಂಡಿತು.
ರಾತ್ರಿ ಹೊತ್ತಿನಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ವಿವಿಧ ಪ್ರಾಣಿಗಳು ಅಥವಾ ಕೀಟಗಳು ಸದ್ದು ಮಾಡುತ್ತಿರುತ್ತದೆ. ಇದಕ್ಕೆ ಅನಗತ್ಯವಾಗಿ ಹೆದರಿ ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ವಾಸ್ತವ ವಿಚಾರವನ್ನು ಅರಿತುಕೊಳ್ಳುವುದಕ್ಕೆ ಧೈರ್ಯದಿಂದ ಪ್ರಯತ್ನ ಮಾಡಿ ಅನ್ನುವುದು ನ್ಯೂಸ್ ನಾಟೌಟ್ ಡಿಜಿಟಲ್ ಮಾಧ್ಯಮದ ಕಳಕಳಿಯಾಗಿದೆ. ಇಲ್ಲಿ ಹಾಸ್ಟೇಲ್ ನಲ್ಲಿ ಆದ ಗೆಜ್ಜೆ ಸದ್ದು ಹಾಗೂ ಮನೆಯಲ್ಲಿ ಕೇಳಿಸಿದ ಗೆಜ್ಜೆ ಸದ್ದಿನ ಯುಟ್ಯೂಬ್ ಲಿಂಕ್ ಗಳನ್ನು ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ಶೇರ್ ಮಾಡಿದ್ದೇವೆ. ಇದನ್ನು ಕೇಳಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಅವಕಾಶವಿದೆ.
ಗೆಜ್ಜೆ ಸದ್ದಿನ ಆಡಿಯೋ ಕೇಳುವುದಕ್ಕೆ ಕೆಳಗಿನ ಲಿಂಗ್ ಒತ್ತಿ