ನ್ಯೂಸ್ ನಾಟೌಟ್: ‘ಚೀತಾ ಯೋಜನೆ’ ಅಡಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ (ಕೆಎನ್ಪಿ) ಶನಿವಾರ ಬಿಡುಗಡೆ ಮಾಡಿದ್ದಾರೆ.
ಚೀತಾ ಬಿಡುಗಡೆಗೊಳಿಸಿ ಮಾತನಾಡಿರುವ ಪ್ರಧಾನಿ, ‘ಇಲ್ಲಿ ರಚಿಸಲಾಗಿರುವ ಆವರಣಕ್ಕೆ ಚೀತಾಗಳು ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ನಂತರ ಅವು ಅರಣ್ಯಕ್ಕೆ ಒಗ್ಗಿಕೊಳ್ಳಬೇಕಿದೆ ಎಂಬುದು ನಿಮಗೆ ತಿಳಿದಿರಬೇಕು. ರಾಜಕೀಯ ನಾಯಕರು, ಮಾಧ್ಯಮದವರು, ಅಧಿಕಾರಿಗಳು, ಸಂಬಂಧಿಕರು ಅಷ್ಟೇಯೇಕೆ ನನಗೂ ಉದ್ಯಾನದೊಳಗೆ ಪ್ರವೇಶ ನಿರಾಕರಿಸುವುದು ನಿಮ್ಮ ಕರ್ತವ್ಯ’ ಎಂದು ‘ಚೀತಾ ಮಿತ್ರ’ರಿಗೆ ಹೇಳಿದ್ದಾರೆ.
ಒಂದು ವೇಳೆ ನಾನು ಹಾಗೂ ನನ್ನ ಸಂಬಂಧಿಕರು ಬಂದರೂ, ಉದ್ಯಾನದೊಳಕ್ಕೆ ಪ್ರವೇಶ ನಿರಾಕರಿಸಿ. ಚೀತಾಗಳು ಇಲ್ಲಿನ ಆವಾಸಸ್ಥಾನಕ್ಕೆ ಒಗ್ಗಿಕೊಂಡ ಬಳಿಕ ಕೆಎನ್ಪಿ ಒಳಗೆ ಪ್ರವೇಶ ನೀಡಲಾಗುವುದು ಎಂದು ಜನರಿಗೆ ಮನವರಿಕೆ ಮಾಡುವಂತೆ ಕಿವಿಮಾತು ಹೇಳಿದ್ದಾರೆ.
ಒಟ್ಟು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್ಗೆ ಬೋಯಿಂಗ್ ವಿಮಾನದಲ್ಲಿ ಶನಿವಾರ ಕರೆತರಲಾಗಿದೆ. ಈ ಪ್ರಾಣಿಗಳನ್ನು ಕರೆತರಲು ಅನುಕೂಲವಾಗುವಂತೆ ವಿಮಾನವನ್ನು ಮಾರ್ಪಾಡು ಮಾಡಲಾಗಿತ್ತು. ವನ್ಯ ಮೃಗಗಳ ಅಂತರ್ ಖಂಡ ಸ್ಥಳಾಂತರದ ಮೊದಲ ಯೋಜನೆ ಇದಾಗಿದೆ.