ನ್ಯೂಸ್ ನಾಟೌಟ್: ಉಚ್ಚಿಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಡಿಕ್ಕಿಯಾಗಿ ತಂದೆ –ಮಗ ಸಾವಿಗೀಡಾಗಿದ್ದರು. ಈ ಸಾವಿನ ಹಿಂದಿರುವುದು 16 ವರ್ಷದ ಬಾಲಕ ಅನ್ನುವುದು ಇದೀಗ ಬೆಳಕಿಗೆ ಬಂದಿದೆ. ಹೌದು, ಅಪ್ರಾಪ್ತ ಬಾಲಕ ಲಾರಿ ಚಲಾಯಿಸಿಕೊಂಡು ಬಂದು ಇಂತಹ ಭಾರೀ ಅವಘಡಕ್ಕೆ ಕಾರಣವಾಗಿದ್ದಾನೆ ಅನ್ನುವ ಸುದ್ದಿ ಇದೀಗ ಹೊರಬಿದ್ದಿದ್ದು ಪೊಲೀಸರು ಕೂಡ ಶಾಕ್ ಆಗಿದ್ದಾರೆ.
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೂಡ್ಸ್ ಲಾರಿಯೊಂದು ಢಿಕ್ಕಿಯಾಗಿತ್ತು.ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರೆ ಮಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಸೂರ್ಯ ಚೈತನ್ಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಸಮರ್ಥ ರಜೆಯಲ್ಲಿ ಗಣೇಶ ಚೌತಿ ಹಬ್ಬಕ್ಕೆ ಊರಿಗೆ ತೆರಳಿದ್ದು, ತಂದೆಯೊಂದಿಗೆ ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಉಚ್ಚಿಲದಲ್ಲಿ ಇಳಿದಿದ್ದ ವೇಳೆ ಅಪರಿಚಿತ ವಾಹನ ಢಿಕ್ಕಿಯಾಗಿ ಪರಾರಿಯಾಗಿತ್ತು. ಪರಾರಿಯಾಗಿದ್ದ ಗೂಡ್ಸ್ ಲಾರಿಯನ್ನು ಪೊಲೀಸರು ಸಿಸಿ ಟಿವಿ ಫೂಟೇಜ್ಗಳನ್ನು ಆಧರಿಸಿ ಬೆಂಬತ್ತಿ ಹೋಗಿ ಲಾರಿಯ ಚಾಲಕ, ಆರೋಪಿ ಶೇಖರ್ನನ್ನು ವಶಕ್ಕೆ ಪಡೆದಿದ್ದು, ಆತನನ್ನು ವಿಚಾರಣೆ ನಡೆಸಿದಾಗ ಲಾರಿಯನ್ನು 16 ವರ್ಷದ ಬಾಲಕ ರಾತ್ರಿಯಿಡೀ ಚಲಾಯಿಸಿಕೊಂಡು ಬಂದಿದ್ದ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಆ ಬಾಲಕ ಲಾರಿಯ ಕ್ಲೀನರ್ ಬಾಯ್ ಆಗಿದ್ದು, ಬಾಲಕನು ಯಾವುದೇ ಲಾರಿಯಾದರೂ ರಾತ್ರಿ ವೇಳೆ ಮುಂಬೈ ಎಕ್ಸ್ ಪ್ರೆಸ್ ವೇನಂತಹ ಹೆದ್ದಾರಿಯಲ್ಲೂ ಸಹಿತ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ.