ನ್ಯೂಸ್ ನಾಟೌಟ್: ಕಾರವಾರದ ದಾಂಡೇಲಿ ನಗರ ವ್ಯಾಪ್ತಿಯಲ್ಲಿ 60 ವರ್ಷದ ವೃದ್ಧೆಯ ಮೇಲೆ ನಡೆದ ಅತ್ಯಾಚಾರ ಹಾಗೂ ದರೋಡೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಜೂನ್ 12ರಂದು ಐಪಿಎಂ ಅರಣ್ಯ ಪ್ರದೇಶದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ ಹಾಗೂ ದರೋಡೆ ನಡೆದಿರುವ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ (ಜೂನ್ 14) ದಾಂಡೇಲಿ ಗ್ರಾಮೀಣ ಠಾಣೆ ವ್ಯಾಪ್ತಿಯ ಕುಳಗಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಆರೋಪಿ ಪೈರೋಜ ಯಾಸೀನ ಯರಗಟ್ಟಿ (23) ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರ ಆಧಾರದ ಮೇಲೆ ದಾಂಡೇಲಿ ನಗರ ಠಾಣೆ ಪಿಎಸ್ಐ ಕಿರಣ ಪಾಟೀಲ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಲು ತೆರಳಿದ್ದರು.
ಆದರೆ ಈ ವೇಳೆ, ಆರೋಪಿ ಪೈರೋಜ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಕಲ್ಲು ಮತ್ತು ಚಾಕುವಿನಿಂದ ಪಿಎಸ್ ಐ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾನೆ. ಆಗ ಪಿಎಸ್ ಐ ಕಿರಣ ಪಾಟೀಲ್ ತಮ್ಮ ಸರ್ವಿಸ್ ರಿವಾಲ್ವರ್ ನಿಂದ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದಾರೆ. ಆದರೂ ಆರೋಪಿ ಮತ್ತೊಮ್ಮೆ ಹಲ್ಲೆಗೆ ಮುಂದಾದಾಗ, ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಪಿಎಸ್ ಐ ಕಿರಣ ಪಾಟೀಲ್ ಮತ್ತು ಸಿಬ್ಬಂದಿಯಾದ ಕೃಷ್ಣಪ್ಪ ಬೆಳ್ಳವರಿ, ಇಮ್ರಾನ್ ಕಂಬಾರಗಣವಿ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದ ಆರೋಪಿ ಪೈರೋಜ ಯಾಸೀನ ಯರಗಟ್ಟಿಯನ್ನು ಸಹ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪೈರೋಜ ದಾಂಡೇಲಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ.
ಸುಳ್ಯದ ಜೈ ಜವಾನ್ ಆಟೋ ರಿಕ್ಷಾ ನಿಲ್ದಾಣಕ್ಕೆ ಮರ ಬಿದ್ದು ಹಾನಿ..! ರಿಕ್ಷಾ ಚಾಲಕರು ಪ್ರಾಣಾಪಾಯದಿಂದ ಪಾರು..!
ಬೆಳ್ತಂಗಡಿ:ವೇಶ್ಯಾವಾಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸ್ ದಾಳಿ..! ಇಬ್ಬರು ಅರೆಸ್ಟ್..!