ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯ ಕುತ್ತಿಗೆ ಸೀಳಿಗೆ ದೇವಾಲಯದ ಮೆಟ್ಟಿಲುಗಳಿಗೆ ರಕ್ತ ತರ್ಪಣ ಮಾಡಿರುವ ಭೀಬತ್ಸ ಘಟನೆ ಗುಜರಾತಿನ ಛೋಟೌದೇಪುರ ಜಿಲ್ಲೆಯಲ್ಲಿ ನಡೆದಿದೆ. ಇದು ನರಬಲಿ ಪ್ರಕರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಯ ಪಣೆಜ್ ಗ್ರಾಮದ ಮನೆಯಿಂದ ತಾಯಿಯ ಸಮ್ಮುಖದಲ್ಲಿಯೇ ಬಾಲಕಿಯನ್ನು ಇಂದು(ಮಾ.10) ಬೆಳಗ್ಗೆ ಆರೋಪಿ ಲಾಲಾ ತಾಡ್ವಿ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಕೊಡಲಿಯಿಂದ ಆಕೆಯ ಕುತ್ತಿಗೆಗೆ ಸೀಳಿ ಹತ್ಯೆ ಮಾಡಿದ್ದಾನೆ ಎಂದು ASP ಗೌರವ್ ಅಗರ್ ವಾಲ್ ತಿಳಿಸಿದ್ದಾರೆ.
ನಂತರ ದುಷ್ಕರ್ಮಿ, ಬಾಲಕಿಯ ಕುತ್ತಿಗೆಯಿಂದ ಕೋಡಿಯಂತೆ ಹರಿಯುತ್ತಿದ್ದ ರಕ್ತವನ್ನು ಸಂಗ್ರಹಿಸಿದ್ದು, ತನ್ನ ಮನೆ ಸಮೀಪದ ಚಿಕ್ಕ ದೇವಾಲಯದ ಮೆಟ್ಟಿಲುಗಳಿಗೆ ತರ್ಪಣ ಮಾಡಿದ್ದಾನೆ. ಬಾಲಕಿಯ ತಾಯಿ ಮತ್ತು ಗ್ರಾಮದ ಇತರರು ಈ ಭೀಬತ್ಸ ಕೃತ್ಯವನ್ನು ನೋಡಿ ಶಾಕ್ ಆಗಿದ್ದಾರೆ. ಆದರೆ, ಆರೋಪಿ ಬಳಿ ಕೊಡಲಿ ಇದುದ್ದರಿಂದ ಯಾರೂ ಏನೂ ಮಾಡದೇ ಮೂಕ ಪ್ರೇಕ್ಷಕರಾಗಿದ್ದರು ಎನ್ನಲಾಗಿದೆ.
ಕೊಲೆಯ ಹಿಂದಿನ ನಿಖರವಾದ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವಂತೆ ತೋರುತ್ತಿದೆ ಎಂದು ಅಗರ್ ವಾಲ್ ಹೇಳಿದರು.
ಬಾಲಕಿಯ ಕುಟುಂಬದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೊಲೆ ಮತ್ತು ಅಪಹರಣದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ .