ನ್ಯೂಸ್ ನಾಟೌಟ್: 4ನೇ ಮಹಡಿಯಿಂದ ಹಾರಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ಶನಿವಾರ(ಎ.5) ನಡೆದಿದೆ. ಬೆಸ್ಟೆಕ್ ಮಾಲ್ ನ ನಾಲ್ಕನೇ ಮಹಡಿಯಿಂದ ಹಾರಿ 17 ವರ್ಷದ ಬಾಲಕ ಶನಿವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಭಿಜಿತ್ ಎಂದು ಗುರುತಿಸಲಾದ ಈ ಬಾಲಕ 12 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ.
ತನಿಖೆಯ ನೇತೃತ್ವ ವಹಿಸಿರುವ ಇನ್ಸ್‌ಪೆಕ್ಟರ್ ಗಗನ್ ದೀಪ್ ಸಿಂಗ್ ಮಾತನಾಡಿ, ಬಾಲಕ ಬೆಳಗ್ಗೆ 9.19 ರ ಸುಮಾರಿಗೆ ಮಾಲ್ ತಲುಪಿ ನಾಲ್ಕನೇ ಮಹಡಿಯಿಂದ ಹಾರಿದ್ದಾನೆ. ತಕ್ಷಣ ಆತನನ್ನು ಮೊಹಾಲಿಯ 6 ನೇ ಹಂತದಲ್ಲಿರುವ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.
ತನ್ನ ಮಗನಲ್ಲಿ ಇತ್ತೀಚೆಗೆ ಖಿನ್ನತೆಯ ಲಕ್ಷಣ ಕಾಣಿಸಿಕೊಂಡಿತ್ತು ಎಂದು ಅಭಿಜಿತ್ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಮಾಲ್ ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹುಡುಗ ನಾಲ್ಕನೇ ಮಹಡಿಯಲ್ಲಿ ಕೆಲವು ನಿಮಿಷಗಳ ಕಾಲ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ.
ಆತ ನೀರಿನ ಬಾಟಲಿಯನ್ನು ಖರೀದಿಸಿ, ನಂತರ ಕಾಯುತ್ತಿರುವಂತೆ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯುತ್ತಿರುವುದು ಕಂಡುಬರುತ್ತದೆ. ಇನ್ಸ್ ಪೆಕ್ಟರ್ ಸಿಂಗ್ ಪ್ರಕಾರ, ಯಾರೂ ತನ್ನನ್ನು ನೋಡುತ್ತಿಲ್ಲ ಎಂದು ಭಾವಿಸುವವರೆಗೂ ಅವನು ಕಾದು ನಂತರ ಹಾರಿದ್ದಾನೆ. ನಮ್ಮ ತಂಡವು ಐದರಿಂದ ಎಂಟು ನಿಮಿಷಗಳ ಒಳಗೆ ಸ್ಥಳಕ್ಕೆ ತಲುಪಿತು ಮತ್ತು ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೆಲವು ಗಂಟೆಗಳ ನಂತರ ಅವನು ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯಿಂದ ನಮಗೆ ತಿಳಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ಹುಡುಗ ಬೆಳಗ್ಗೆ ಮಾಲ್ ನಲ್ಲಿ ಏನು ಮಾಡುತ್ತಿದ್ದ ಎಂದು ವಿಚಾರಿಸಿದಾಗ, ಮಾಲ್‌ನಲ್ಲಿರುವ ಫುಡ್ ಕೋರ್ಟ್ ಮತ್ತು ಮಲ್ಟಿಪ್ಲೆಕ್ಸ್ ಬೇಗನೆ ತೆರೆಯುತ್ತವೆ, ಮಾಲ್ ನ ಸಿಬ್ಬಂದಿ ಅವನು ನೀರಿನ ಬಾಟಲಿಯನ್ನು ಖರೀದಿಸಿದ್ದಾಗಿ ನಮಗೆ ತಿಳಿಸಿದರು ಎಂದು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.