ನ್ಯೂಸ್ ನಾಟೌಟ್: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕರಾದ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸಿದೆ.
ಇದರೊಂದಿಗೆ ರಾಷ್ಟ್ರ ರಾಜಧಾನಿಗೆ ನಾಲ್ಕನೇ ಬಾರಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಂತಾಗಿದೆ. ಇನ್ನು ಮುಖ್ಯಮಂತ್ರಿ ರೇಸ್ ನಲ್ಲಿದ್ದ ಘಾಟನುಘಟಿ ನಾಯಕರನ್ನು ಹಿಂದಿಕ್ಕಿ ರೇಖಾ ಗುಪ್ತಾ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ.
27 ವರ್ಷಗಳ ನಂತರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ರೇಖಾ ಗುಪ್ತಾ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಇದರೊಂದಿಗೆ “ಕಾಮ್ ಹಿ ಪೆಹಚಾನ್” (ನನ್ನ ಕೆಲಸವೇ ನನ್ನ ಗುರುತು) ಎನ್ನುವ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಿದ ಆರ್ಎಸ್ಎಸ್ ನಾಯಕಿಗೆ ಬಿಜೆಪಿ ಮಣೆ ಹಾಕಿದೆ. ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಸತೀಶ್ ಉಪಾಧ್ಯಾಯ ಮತ್ತು ಜಿತೇಂದ್ರ ಮಹಾಜನ್ ಸೇರಿದಂತೆ ಹಲವರನ್ನು ಹಿಂದಿಕ್ಕಿ ಮುಖ್ಯಮಂತ್ರಿ ಹುದ್ದೆ ಪಡೆದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಯುವಕ, ಯುವತಿ ಗ್ರಾಮವೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವು..! ಆಕೆಯ ಶವ ಕಾರಿನಲ್ಲಿ, ಆತನ ಶವ ಮರದಲ್ಲಿ..!
ಗುರುವಾರ(ಫೆ.20) ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ರೇಖಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅವರೊಂದಿಗೆ 6 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.