ನ್ಯೂಸ್ ನಾಟೌಟ್: ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ. ಹೆಂಡತಿ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಪತಿ ರಾಜು ಎಂಬಾತ ದೂರು ದಾಖಲಿಸಿದ್ದಾನೆ.
ಪತಿ ರಾಜು ತನ್ನ ಹೆಂಡತಿಯನ್ನು ಯಾರೋ ಕಿಡಿಗೇಡಿ ಕಿಡ್ನ್ಯಾಪ್ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕೆಯನ್ನು ಹುಡುಕಿ ಕೊಡಿ ಎಂದು ಪೊಲೀಸರ ಬಳಿ ಕಣ್ಣೀರಿಟ್ಟಿದ್ದಾರೆ. ಅಪಹರಣ ಪ್ರಕರಣ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87ರ ಅಡಿಯಲ್ಲಿ ಪೊಲೀಸರು ರಾಜು ನೀಡಿದ ದೂರನ್ನು ದಾಖಲಿಸಿದ್ದಾರೆ.
“ನನ್ನ ಪತ್ನಿ ಹೆಸರು ರಾಜೇಶ್ವರಿ. ನಮ್ಮಿಬ್ಬರಿಗೆ ಆರು ಮಕ್ಕಳಿವೆ. ಹರ್ದೋಯ್ ನ ಹರ್ಪಾಲ್ ಪುರ ಪ್ರದೇಶದಲ್ಲಿ ನಾವು ವಾಸಿಸುತ್ತಿದ್ದೆವು. ನನ್ಹೆ ಪಂಡಿತ್ ಎಂಬ ವ್ಯಕ್ತಿ ಆಗಾಗ್ಗೆ ನಾವಿರುವ ಸ್ಥಳಕ್ಕೆ ಭಿಕ್ಷೆ ಬೇಡಲು ಬರುತ್ತಿದ್ದ. ಇದೇ ವೇಳೆ ನನ್ನ ಪತ್ನಿ ಜತೆ ಹರಟೆ, ತಮಾಷೆ ಮಾಡುತ್ತಿದ್ದ. ಅವರಿಬ್ಬರು ಒಮ್ಮೊಮ್ಮೆ ದೂರವಾಣಿ ಕರೆಯಲ್ಲಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿತ್ತು” ಎಂದು ರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನವರಿ 3ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ನಮ್ಮ ಮಗಳು ಖುಷ್ಬೂಗೆ ಬಟ್ಟೆ,, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದಳು. ಎಷ್ಟೇ ಸಮಯವಾದರೂ ಆಕೆ ಮನೆಗೆ ಹಿಂತಿರುಗದೆ ಇದ್ದಾಗ ನಾನು ನಗರದ ಸುತ್ತಮುತ್ತ ಸೇರಿದಂತೆ ಎಲ್ಲಾ ಕಡೆ ಹುಡುಕಾಡಿದರೂ ಪತ್ನಿಯ ಸುಳಿವು ಸಿಗಲಿಲ್ಲ. ನಾನು ಎಮ್ಮೆಯನ್ನು ಮಾರಿ ಮನೆಯಲ್ಲಿ ಇರಿಸಿದ್ದ ಹಣದ ಸಮೇತ ಪತ್ನಿ ಪರಾರಿಯಾಗಿದ್ದಾಳೆ. ನನ್ನ ಪ್ರಕಾರ, ಆಕೆ ನನ್ಹೆ ಪಂಡಿತ್ ಜತೆ ಓಡಿ ಹೋಗಿದ್ದಾಳೆ ಎಂಬ ಶಂಕೆ ಇದೆ. ದಯವಿಟ್ಟು ಆಕೆಯನ್ನು ಹುಡುಕಿ ಕೊಡಿ” ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.
Click