ಉಡುಪಿ: ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಜ್ಯುವೆಲ್ಲರಿ ಸಿಬ್ಬಂದಿಯ ಮೃತದೇಹ ಬಾವಿಯಲ್ಲಿ ಪತ್ತೆ..! ರಾತ್ರಿ ಮನೆಯಲ್ಲಿ ನನಗೆ ಹೆದರಿಕೆ ಆಗುತ್ತದೆ, ಈಗ ಬರುತ್ತೇನೆಂದು ಹೇಳಿ ಹೋಗಿದ್ದ ವ್ಯಕ್ತಿ..!

ನ್ಯೂಸ್ ನಾಟೌಟ್: ಜ್ಯುವೆಲ್ಲರಿ ಸಿಬ್ಬಂದಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಮಲ್ಪೆಯ ತೆಂಕನಿಡಿಯೂರು ಗ್ರಾಮದ ಗರಡಿಮಜಲು ದೇವಿಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಬಡಾನಿಡಿಯೂರು ಗ್ರಾಮದ ರಮೇಶ ಶೇರಿಗಾರ್(37) ಎಂದು ಗುರುತಿಸಲಾಗಿದೆ. ಉಡುಪಿಯ ಆಭರಣ ಜುವೆಲ್ಲರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಜ.12ರಂದು ರಾತ್ರಿ ಮನೆಯಲ್ಲಿ ನನಗೆ ಹೆದರಿಕೆ ಆಗುತ್ತದೆ, ಈಗ ಬರುತ್ತೇನೆಂದು ಹೇಳಿ ತನ್ನ ಮೊಬೈಲ್‌ ನ್ನು ತಂಗಿಗೆ ನೀಡಿ ಮನೆಯಿಂದ ಹೋಗಿದ್ದರು ಎನ್ನಲಾಗಿದೆ.ಬಳಿಕ ರಮೇಶ್ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜ.14ರಂದು ಸಂಜೆ 7 ಗಂಟೆಗೆ ಸುಮಾರಿಗೆ ಗರಡಿಮಜಲು ದೇವಿಕಟ್ಟೆಯ ಹಿಂಬದಿಯ ತೋಟದಲ್ಲಿರುವ ಬಾವಿಯ ಒಳಗೆ ರಮೇಶ ಅವರ ಮೃತದೇಹ ಪತ್ತೆಯಾಗಿದೆ. ಇವರು ಮಾನಸಿಕ ಖಿನ್ನತೆಯಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ರಾತ್ರಿ ವೇಳೆಯೇ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ಈಶ್ವರ್ ಮಲ್ಪೆ ಮೇಲಕ್ಕೆತ್ತಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. Click