ನ್ಯೂಸ್ ನಾಟೌಟ್: ಇಲ್ಲೊಬ್ಬ ಅಪ್ರಾಪ್ತ ಹುಡುಗ ತನ್ನ ಪರಿಚಯದ ಹುಡುಗಿಯೊಂದಿಗೆ ಮಾತನಾಡಲು ಹೋಗಿ ಸಮಸ್ಯೆಗೆ ಸಿಲುಕಿದ್ದಾನೆ. ಹೌದು ಆತ ತನ್ನ ಪರಿಚಯದ ಹುಡುಗಿಯೊಂದಿಗೆ ಮಾತನಾಡಿದ್ದು, ಈ ವಿಷಯ ಆ ಹುಡುಗಿಯ ಅಣ್ಣಂದಿರಿಗೆ ಗೊತ್ತಾಗಿ ಅವರು ಆ ಹುಡುಗನನ್ನು ಕರೆಸಿ ನಮ್ಮ ತಂಗಿಯೊಂದಿಗೆ ಮಾತನಾಡಲು ನಿನಗೆಷ್ಟು ಧೈರ್ಯ ಎಂದು ಹೇಳಿ ಬೆಲ್ಟ್ ಮತ್ತು ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದ್ದು, ಯುವಕರ ಗುಂಪೊಂದು 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಬೆಲ್ಟ್ ಮತ್ತು ಚಪ್ಪಲಿಯಿಂದ ಹೊಡೆದಿದ್ದಾರೆ. ಆ ಬಾಲಕ ತಮ್ಮ ತಂಗಿಯೊಂದಿಗೆ ಮಾತನಾಡಿದನೆಂದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ನೇಹಿತನ ಮೂಲಕ ಕರೆ ಮಾಡಿಸಿ, ಆ ಅಪ್ರಾಪ್ತ ಬಾಲಕನನ್ನು ಕರೆಸಿ, ನೀನೇ ಅಲ್ವಾ ನಮ್ಮ ತಂಗಿಯೊಂದಿಗೆ ಫೋನ್ ನಲ್ಲಿ ಮಾತನಾಡೋದು ಎಂದು ಆರೋಪಿಸಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾನು ನಿಮ್ಮ ತಂಗಿಯೊಂದಿಗೆ ಮಾತನಾಡಿಲ್ಲ ಎಂದು ಹುಡುಗ ಎಷ್ಟೇ ಹೇಳಿದ್ರೂ ಹುಡುಗಿಯ ಅಣ್ಣಂದಿರು ಆತನಿಗೆ ಬೆಲ್ಟ್ ಮತ್ತು ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ.
ಈ ಬಗ್ಗೆ ದಾಬ್ರಾ ದೇಹತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು, ಸಂತ್ರಸ್ತ ಎಲ್ಲರೂ ಅಪ್ರಾಪ್ತರು ಎಂದು ಪೊಲೀಸರು ತಿಳಿಸಿದ್ದಾರೆ.
Click