ನ್ಯೂಸ್ ನಾಟೌಟ್: ರ್ಕಾರಿ ಸಾರಿಗೆ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಕೂಲಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 18 ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ರಾಯಚೂರಿನ ಮುದಗಲ್ ಪಟ್ಟಣದಲ್ಲಿರುವ ಸಮೀಪದಲ್ಲಿ ಇಂದು(ಜ.23) ನಡೆದಿದೆ.
ನಸುಕಿನ ಜಾವ ರಾಯಚೂರಿನ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ ಬನ್ನಿಗೋಳದ ಗ್ರಾಮದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿದ್ದ ಶ್ರೀದೇವಿ (19) ಮೃತ ಮಹಿಳೆಯೆಂದು ಗುರುತಿಸಲಾಗಿದೆ. ಇತ್ತೀಚಿಗಷ್ಟೇ ಶ್ರೀದೇವಿಯ ಮದುವೆ ಆಗಿತ್ತು ಎಂದು ತಿಳಿದುಬಂದಿದೆ. ಇನ್ನುಳಿದ 18 ಜನ ಕೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾರಿಗೆ ಬಸ್ ಚಾಲಕನೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನ್ನಿಗೋಳ ಗ್ರಾಮದ ಕೂಲಿಕಾರ್ಮಿಕರು ಕೆಲಸಕ್ಕಾಗಿ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಅಂಕಲಿಮಠದಿಂದ ಮುದಗಲ್ ಪಟ್ಟಣದ ಕಡೆ ಬಸ್ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಘಟನೆ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Click