ನ್ಯೂಸ್ ನಾಟೌಟ್: ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ನಕ್ಸಲ್ ವಾದ ಅಂತಿಮ ಹಂತಕ್ಕೆ ಬಂದು ನಿಂತಿದೆ ಎನ್ನಲಾಗುತ್ತಿದೆ. ಸರ್ಕಾರದ ಸೂಚನೆಯಂತೆ ಶರಣಾಗತಿಗೆ ಆರು ಮಂದಿ ನಕ್ಸಲರು ನಿರ್ಧಾರ ಮಾಡಿದ್ದಾರೆ. ಬುಧವಾರ(ಜ.7) ಚಿಕ್ಕಮಗಳೂರಿನಲ್ಲಿ ಶರಣಾಗುವ ಸಾಧ್ಯತೆ ಇದೆ. ಶರಣಾಗುವ ಮುನ್ನ ನಕ್ಸಲರು ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಒಟ್ಟು ಆರು ಜನ ನಕ್ಸಲ್ರು ಶರಣಾಗಲಿದ್ದಾರೆ. ಶರಣಾಗುವ ಮುನ್ನ ನಕ್ಸಲರು ಸರ್ಕಾರಕ್ಕೆ ಅಂದರೆ ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್ ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್ ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದಾರೆ.
“ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಿಗಳಿಗೆ ಬರೆಯುತ್ತಿದ್ದೇವೆ. ದೇಶದ ಇಂದಿನ ಸಂದರ್ಭ, ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಠೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
Click