ಮೌಂಟ್‌ ಎವರೆಸ್ಟ್‌ ಏರುವುದು ಇನ್ನು ಮುಂದೆ ದುಬಾರಿ..! 8 ವರ್ಷಗಳ ಬಳಿಕ ಶುಲ್ಕ ಪರಿಷ್ಕರಿಸಿದ ನೇಪಾಳ ಸರ್ಕಾರ..!

ನ್ಯೂಸ್ ನಾಟೌಟ್: ಜಗತ್ತಿನ ಎತ್ತರದ ಪರ್ವತವಾದ ಮೌಂಟ್‌ ಎವರೆಸ್ಟ್‌ ಏರುವ ಕನಸು ಕಾಣುತ್ತಿರುವವರಿಗೆ ಇನ್ನು ಮುಂದೆ ನೀವು ದುಬಾರಿ ಶುಲ್ಕವನ್ನು ಪಾವತಿಸಿ ಪರ್ವತ ಏರಬೇಕಾಗುವುದು. ನೇಪಾಳ ಸರ್ಕಾರ 8 ವರ್ಷದ ಬಳಿಕ ದರವನ್ನು ಪರಿಷ್ಕರಿಸಿದೆ. ಶೇ.36ರಷ್ಟು ಶುಲ್ಕವನ್ನು ಏರಿಸಿ ಚಾರಣಿಗರಿಗೆ ಶಾಕ್‌ ನೀಡಿದೆ. ವಿದೇಶಿಯರಿಗೆ ಪರ್ವತಾರೋಹಣ ಶುಲ್ಕವನ್ನು ಈ ಮೊದಲು 11,000 ಡಾಲರ್‌ ( ಅಂದಾಜು 9 ಲಕ್ಷ ರೂ.) ಇತ್ತು. ಈಗ ಈ ಶುಲ್ಕವನ್ನು 15,000 ಡಾಲರ್‌ಗೆ(13 ಲಕ್ಷ ರೂ.) ಏರಿಕೆ ಮಾಡಿದೆ. ಹೊಸ ದರವು ಈ ವರ್ಷದ 2025 ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಇದ್ದ 2,750 ಡಾಲರ್‌ (ಅಂದಾಜು 2.37 ಲಕ್ಷ ರ) ಶುಲ್ಕವನ್ನು 3,750 ಡಾಲರ್‌ (ಅಂದಾಜು 3.23 ಲಕ್ಷ ರೂ.) ಏರಿಸಲಾಗಿದೆ. ನೇಪಾಳಿ ಪರ್ವಾತರೋಹಿಗಳಿಗೆ ಈ ಹಿಂದೆ 75,000 ನೇಪಾಳಿ ರೂಪಾಯಿ (545 ಡಾಲರ್‌) ಇದ್ದರೆ ಈಗ ಶುಲ್ಕವನ್ನು 1,50,000 ನೇಪಾಳಿ ರೂಪಾಯಿಗೆ(1,090 ಡಾಲರ್) ಏರಿಕೆ ಮಾಡಲಾಗಿದೆ. ನೇಪಾಳ ಕೊನೆಯದಾಗಿ ಜನವರಿ 1, 2015 ರಂದು ಪರ್ವತಾರೋಹಣ ಶುಲ್ಕವನ್ನು ಪರಿಷ್ಕರಿಸಿತ್ತು. ಸಾಮಾನ್ಯವಾಗಿ ಏಪ್ರಿಲ್‌ ನಿಂದ ಮೇ ವರೆಗೆ ಹೆಚ್ಚಿನ ಸಂಖ್ಯೆಯ ಚಾರಣಿಗರು ಪರ್ವತವನ್ನು ಹತ್ತಲು ಬಯಸುತ್ತಾರೆ. ಪರ್ವತ ಏರಲು ಪಾವತಿಸುವ ಅನುಮತಿ ಶುಲ್ಕ ಹಾಗೂ ವಿದೇಶಿ ಪರ್ವತಾರೋಹಿಗಳು ಮಾಡುವ ಖರ್ಚು ನೇಪಾಳ ಆದಾಯದ ಮೂಲಗಳಲ್ಲಿ ಒಂದಾಗಿದೆ ಎನ್ನಲಾಗಿದೆ. 8,848.86 ಮೀಟರ್ ಎತ್ತರ ಹೊಂದಿರುವ ಮೌಂಟ್‌ ಎವರೆಸ್ಟ್‌ ಅನ್ನು ಎರಡು ಮಾರ್ಗ ಬಳಸಿ ಹತ್ತಬಹುದು. ನೇಪಾಳದ ಆಗ್ನೇಯ ಭಾಗ ಮತ್ತು ಟಿಬೆಟ್‌ ನ ಉತ್ತರದಿಂದ ಹತ್ತಬಹುದು. ನೇಪಾಳ ಮಾರ್ಗದಲ್ಲಿ ಸವಾಲುಗಳು ಕಡಿಮೆ ಇದ್ದರೂ ಹಿಮಪಾತ, ವಿಪರೀತ ಗಾಳಿ ಬೀಸುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಹೆಚ್ಚಿನವರು ಈ ಮಾರ್ಗವನ್ನೇ ಆರಿಸಿಕೊಳ್ಳುವುದು ನೇಪಾಳಕ್ಕೆ ವರವಾಗಿದೆ. Click