ನ್ಯೂಸ್ ನಾಟೌಟ್: ಪುತ್ತೂರಿನ ಕುಂಬ್ರದಿಂದ ತಂದೆಯೊಂದಿಗೆ ಬಸ್ ಹತ್ತಿದ್ದ ವಿಶೇಷ ಚೇತನ ಬಾಲಕ ಸುಳ್ಯದಲ್ಲಿ ಹಠಾತ್ ನಾಪತ್ತೆಯಾಗಿದ್ದ, ಇದೀಗ ಆ ಬಾಲಕ ಪತ್ತೆಯಾಗಿದ್ದಾನೆ. ವಿಕಾಸ್ ಎಂಬ ಹೆಸರಿನ ಹುಡುಗ ನಾಪತ್ತೆಯಾದ ಬಗ್ಗೆ ‘ನ್ಯೂಸ್ ನಾಟೌಟ್’ ವೆಬ್ ಸೈಟ್ ನಲ್ಲಿ ಜ.7ರಂದು ಬೆಳಗ್ಗೆ ವರದಿ ಮಾಡಲಾಗಿತ್ತು.
ಈ ವರದಿ ಪ್ರಕಟವಾದ ಕೇವಲ 5 ನಿಮಿಷದಲ್ಲಿ ಬಾಲಕ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಬಳಿ ಇದ್ದಾನೆಂದು ನ್ಯೂಸ್ ನಾಟೌಟ್ ಕಚೇರಿಗೆ ಎರಡು ಕರೆಗಳು ಬಂದವು. ಈ ವಿಚಾರವನ್ನು ಪ್ರಗತಿ ಆಂಬ್ಯುಲೆನ್ಸ್ ಅಚ್ಚು ಅವರಿಗೆ ನ್ಯೂಸ್ ನಾಟೌಟ್ ಕಚೇರಿಯಿಂದ ದೂರವಾಣಿ ಮೂಲಕ ತಿಳಿಸಲಾಯಿತು. ತಕ್ಷಣ ಅವರು ಬಾಲಕ ಇಂಥಹ ಜಾಗದಲ್ಲಿದ್ದಾನೆಂದು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಆ ಬಳಿಕ ಬಾಲಕನನ್ನು ಸುಳ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿದೆ. ಪೋಷಕರಿಗೆ ವಿಚಾರವನ್ನು ತಿಳಿಸಲಾಗಿದ್ದು ಅವರು ಸುಳ್ಯ ಪೊಲೀಸ್ ಠಾಣೆಯತ್ತ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.