- +91 73497 60202
- [email protected]
- January 30, 2025 11:02 PM
ನ್ಯೂಸ್ ನಾಟೌಟ್: ‘ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ತುಳುನಾಡಿನ ಎಲ್ಲರ ಸಂಭ್ರಮದ ಕಲೆ. ನಮ್ಮ ದೇಶ ಬಹುತ್ವದ ದೇಶ ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಜ.11 ಸಂಜೆ ಮಾತನಾಡಿದರು. ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಸುಪ್ರೀಂ ಕೋರ್ಟ್ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ’ಎಂದರು. ‘ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ’ ಎಂದು ಸಿಎಂ ಹೇಳಿದರು. 24 ಕಂಬಳಗಳನ್ನು ನಡೆಸಲು ಪ್ರತೀ ಕಂಬಳಕ್ಕೆ ತಲಾ 5 ಲಕ್ಷ ರೂ. ನೆರವನ್ನು ನಮ್ಮ ಸರ್ಕಾರ ನೀಡಿದೆ.ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಬೇಡಿಕೆಯಂತೆ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದರು.ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್, ಶಾಸಕರಾದ ಆಶೋಕ್ ರೈ ಸೇರಿ ಹಲವು ಪ್ರಮುಖರು ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ