- +91 73497 60202
- [email protected]
- January 6, 2025 2:41 PM
ಕುಡಿದ ಅಮಲಿನಲ್ಲಿ ವಿದ್ಯುತ್ ತಂತಿಗಳ ಮೇಲೆಯೇ ಮಲಗಿದ ಭೂಪ..! ತಾಯಿಯ ಪಿಂಚಣಿಯ ಹಣಕ್ಕಾಗಿ ಹಠ..!
ನ್ಯೂಸ್ ನಾಟೌಟ್ :ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗುಪುರಂ ಎಂಬಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿ ಮೇಲೆ ಅಡ್ಡಲಾಗಿ ಮಲಗಿ ಗಮನ ಸೆಳೆದಿದ್ದಾನೆ. ಮಾದಕ ವ್ಯಸನಿ ಯಜ್ಜಲ ವೆಂಕಣ್ಣ ಎಂಬಾತ ಮದ್ಯ ಖರೀದಿಗೆ ಹಣ ನೀಡುವಂತೆ ತಾಯಿಗೆ ಒತ್ತಡ ಹೇರಿ, ಕರೆಂಟ್ ಕಂಬ ಹತ್ತಿ ವಿದ್ಯುತ್ ತಂತಿಗಳ ಮೇಲೆ ಮಲಗಿ ಅವಾಂತರ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ತನ್ನ ವಯಸ್ಸಾದ ತಾಯಿಗೆ ಪಿಂಚಣಿ ಬಂದಿದ್ದನ್ನು ಅರಿತ ವೆಂಕಣ್ಣ ಮದ್ಯ ಖರೀದಿಸಲು ಹಣ ನೀಡುವಂತೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡುವುದಿಲ್ಲ ಎಂದಿದ್ದರು. ಹೀಗಾಗಿ ಅದಾಗಲೇ ಮದ್ಯದ ಅಮಲಿನಲ್ಲಿದ್ದ ವೆಂಕಣ್ಣ, ಕರೆಂಟ್ ಕಂಬ ಹತ್ತಿದ್ದಾನೆ.ವೆಂಕಣ್ಣ ಕರೆಂಟ್ ಕಂಬ ಏರುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ವಿದ್ಯುತ್ ಡಿಪಿ ಸ್ವಿಚ್ ಆಫ್ ಮಾಡಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಆತನ ಜೀವ ಉಳಿದಿದೆ. ಮಲಗಿದ್ದಷ್ಟೇ ಅಲ್ಲದೆ, ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ಸಾಹಸ ಮೆರೆದಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಕೊನೆಗೆ ಏನೇನೋ ಹೇಳಿ ಗ್ರಾಮಸ್ಥರು ಕಷ್ಟಪಟ್ಟು ವೆಂಕಣ್ಣನನ್ನು ಕೆಳಗಿಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ