ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಕನ್ನಡಿಗರು ಕೂಡ ಕಣ್ಣೀರು ಹಾಕುವಂತಾಗಿದೆ. ಪುಣ್ಯಸ್ನಾನಕ್ಕೆ ಹೋದವರ ಪಾಡು ಹೇಳತೀರದಾಗಿದೆ. ಬೆಳಗಾವಿಯಿಂದ ಖಾಸಗಿ ಬಸ್ ನಲ್ಲಿ ಮೂವತ್ತು ಜನರ ತಂಡ ಪ್ರಯಾಗರಾಜ್ ಗೆ ಹೋಗಿತ್ತು. ಈ ಪೈಕಿ ಕಾಲ್ತುಳಿತದ ಬಳಿಕ ಐವರು ನಾಪತ್ತೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಸಂಪರ್ಕಕ್ಕೆ ಸಿಗದ ಕಾರಣ ಸಂಬಂಧಿಕರಲ್ಲಿ ಆತಂಕ ಉಂಟಾಗಿದೆ.
ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಚದುರಿ ಹೋಗಿದ್ದ ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದು ಗುಂಪಿನ ಐವರು ಕನ್ನಡಿಗರು ತ್ರಿವಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಬೇಕೆಂದು ಮಹಾ ಕುಂಭಮೇಳಕ್ಕೆ ಹೋಗಿದ್ದರು. ಆದರೆ ದಿಢೀರ್ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಪಾರಾದವರನ್ನು ಚಿಕ್ಕಬಳ್ಳಾಪುರದ ನಾಲ್ವರು, ನೆಲಮಂಗಲದ ಓರ್ವ ಎಂದು ಗುರುತಿಸಲಾಗಿದೆ. 2 ಬಸ್ ನಲ್ಲಿ 60 ಜನ ಬಂದಿದ್ದೆವು. 9 ಜನ ಸ್ನಾನ ಮಾಡುವುದಕ್ಕೆ ಹೋದಾಗ ಕಾಲ್ತುಳಿತ ಸಂಭವಿಸಿತು. ತಪ್ಪಿಸಿಕೊಳ್ಳಲು ನಮಗೆ ಯಾವುದೇ ದಾರಿಯೇ ಸಿಕ್ಕಿಲ್ಲ ಎಂದು ಸರೋಜಿನಿ ಎಂಬ ಕನ್ನಡತಿಯೊಬ್ಬರು ಹೇಳಿಕೊಂಡಿದ್ದಾರೆ.
Click