ನ್ಯೂಸ್ ನಾಟೌಟ್ : ಫೆಬ್ರವರಿ 4 ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮುಹೂರ್ತ ಫಿಕ್ಸ್ ಆಗಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ಮಾಜಿ ಡಿಸಿಎಂ ಮತ್ತು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮುಂದಾಗಿದ್ದಾರೆ. 1008 ಸಾಧು ಸಂತರ ಪಾದ ಪೂಜೆಯ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ. ಜನವರಿ 12 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಪ್ರವಾಸದ ಮೂಲಕ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.
ಹಿಂದೂ ಸಮಾಜದ ಪರವಾಗಿ ಬ್ರಿಗೇಡ್ ಹೋರಾಟ ಮಾಡಲಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಪರ ಬ್ರಿಗೇಡ್ ಕೆಲಸ ಮಾಡಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವುದಕ್ಕೆ ಮುಖ್ಯ ಉದ್ದೇಶ ಹಿಂದುಳಿದ ಮಠಗಳ ಅಭಿವೃದ್ಧಿ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದಿದ್ದಾರೆ.
ನನ್ನ ಜೀವನದಲ್ಲಿ ನಾನು ರಾಜಕಾರಣದ ಜೊತೆ ಜೊತೆಗೆ ಸಾಧು ಸಂತರ ಸೇವೆ ಮಾಡಿದ್ದೇನೆ. ರಾಜಕಾರಣದ ಜೊತೆ ಜೊತೆಗೆ ಧಾರ್ಮಿಕ ಕಾರ್ಯದಲ್ಲೂ ನಾನು ಭಾಗಿಯಾಗುತ್ತಿದ್ದೇನೆ. ಈ ಹಿಂದೆ ಮಠ ಮಂದಿರಗಳಿಗೆ ಹಣ ನೀಡುವಂತೆ ಮಾಡಿದ್ದು ನಾನೇ. ಹೀಗಾಗಿ ನಾನು ಧಾರ್ಮಿಕ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಕೆಲವರು ಕೆಲಸ ಮಾಡಿದ್ದರು. ನನ್ನ ವಿರುದ್ಧ ಕೆಲಸ ಮಾಡಿದವರಿಗೆ ದೇವರೇ ಉತ್ತರ ನೀಡ್ತಿದ್ದಾನೆ. ಮುಂದಿನ ದಿನಗಳಲ್ಲಿ ಅವರಿಗೆ ದೇವರು ಒಳ್ಳೆಯದ್ದು ಮಾಡುತ್ತಾರೆ. ನನ್ನ ವಿರುದ್ಧ ಕೆಲಸ ಮಾಡಿದವರು ಯಾರು, ಯಾವ ಪಕ್ಷದವರು ಅನ್ನೋದು ಸಮಯ ಬಂದಾಗ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
Click