ನ್ಯೂಸ್ ನಾಟೌಟ್: ಕಾಮುಕರ ಅಟ್ಟಹಾಸಕ್ಕೆ ಕೊನೆಯೇ ಇಲ್ಲವೆಂದು ಕಾಣುತ್ತದೆ.ನಿರಂತರವಾಗಿ ಇಂತಹ ದುಷ್ಕೃತ್ಯಗಳು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡಿತಾನೇ ಇದ್ದಾವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೆ ಹೆಣ್ಣಿನ ಬದುಕಿನಲ್ಲಿ ಕಾಮುಕರ ನೆರಳು ಬೀಳುತ್ತಲೇ ಇವೆ.
ಇದೀಗ ನೆರೆಯ ಕೇರಳ ರಾಜ್ಯದಲ್ಲಿಯೂ ಬೆಚ್ಚಿಬೀಳಿಸುವಂತಹ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ.ಇದು ಇಡೀ ಭಾರತದಾದ್ಯಂತ ಅನೇಕರನ್ನು ಬೆಚ್ಚಿ ಬೀಳಿಸಿದೆ. ಹೌದು, ಪತ್ತನಂತಿಟ್ಟ ಜಿಲ್ಲೆಯ ಯುವತಿಯೊಬ್ಬಳು ಚಿಕ್ಕ ವಯಸ್ಸಿನಲ್ಲೇ ಬರೋಬ್ಬರಿ ೭೦ ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದಲ್ಲದೇ ಆಕೆಗೆ ೧೫೦೦ ದಿನಗಳ ಕಾಲ ನಿತ್ಯ ನರಕ ಅನುಭವಿಸುವ ನೋವನ್ನು ನೀಡಿದ್ದಾರೆ.
ಆಕೆಗೆ 13 ನೇ ವಯಸ್ಸು ತುಂಬುತ್ತಿದ್ದಾಗಲೇ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, ಸುಮಾರು 70 ಕಾಮುಕರು ಐದು ವರ್ಷಗಳ ಕಾಲ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ 1500 ದಿನಗಳ ಕಾಲ ಆಕೆ ಈ ಯಾತನೆ ಅನುಭವಿದ್ದು ಈ ಘಟನೆ ಬಗ್ಗೆ ಕೇಳಿದಾಗಲೇ ಕರುಳು ಹಿಂಡಿ ಬರುತ್ತೆ.
ಈ ನೋವನ್ನು ಯಾರಿಗೂ ಹೇಳದೇ ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದ ಆಕೆ, ಇದೀಗ 18 ವರ್ಷ ತುಂಬಿದ ನಂತರ, ಅವಳು ಅನ್ಯಾಯದ ಬಗ್ಗೆ ತನ್ನ ಶಾಲಾ ಸಲಹೆಗಾರರಿಗೆ ಧೈರ್ಯದಿಂದ ಹೇಳಿದ್ದಾಳೆ. ಕೌನ್ಸೆಲಿಂಗ್ ನಲ್ಲಿ ಈ ವಿಚಾರ ಹೊರಬಿದ್ದಿದೆ. ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕಳೆದ ಐದು ವರ್ಷಗಳಲ್ಲಿ ಸುಮಾರು 70 ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳುತ್ತಿದ್ದಂತೆ ಪೊಲೀಸರು ಕೂಡ ಬೆಚ್ಚಿಬಿದ್ದಿದ್ದಾರೆ. ಆ ವೇಳೆ ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ನೆರವಿನಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವರನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ಆರೋಪಿಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಅವರನ್ನೂ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಬಂಧಿತರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯ ಮೇಲೆ ಉನ್ನತ ಮಟ್ಟದ ಅಧಿಕಾರಿಗಳು ನಿಗಾ ವಹಿಸಿದ್ದಾರೆ.