ಮೂರು ಹಳ್ಳಿಗಳ ಜನರಲ್ಲಿ ಡಿಢೀರ್ ತಲೆ ಕೂದಲು, ಗಡ್ಡ ಉದುರುವಿಕೆ..! ನಿಗೂಢವಾಗಿ ತಲೆ ಬೋಳಾಗುತ್ತಿರುವುದು ಕಂಡು ಜನರಲ್ಲಿ ಆತಂಕ..!

ನ್ಯೂಸ್ ನಾಟೌಟ್ : ಮಹಾರಾಷ್ಟ್ರದ ಮೂರು ಹಳ್ಳಿಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಲ್ಲಿ ಹಠಾತ್ ಕೂದಲು ಉದುರುವಿಕೆ ಮತ್ತು ತಲೆ ಬೋಳಾಗುತ್ತಿರುವ ಸಮಸ್ಯೆ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬುಲ್ಧಾನಾದ ಹಳ್ಳಿಗಳಲ್ಲಿ 30 ರಿಂದ 40 ಜನರು ಕೂದಲು ಉದುರುವಿಕೆ ಸಮಸ್ಯೆಯನ್ನು ಎದುರಿಸಿದ್ದಾರೆ. ಹಠಾತ್ ಕೂದಲು ಉದುರುವಿಕೆಗೆ ನಿರ್ದಿಷ್ಟ ಕಾಯಿಲೆ ಅಥವಾ ಇನ್ಯಾವುದೇ ಅಂಶಗಳು ಕಾರಣವಾಗಿದೆಯೇ ಎಂಬುವುದು ಇನ್ನು ಕೂಡ ನಿಗೂಢವಾಗಿಯೇ ಉಳಿದಿದೆ. ಕೂದಲು ಉದರುವಿಕೆ ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಜನರಲ್ಲಿ ಆತಂಕ ಆವರಿಸಿದೆ. ಈ ಬಗ್ಗೆ ಮಾಹಿತಿ ತಿಳಿದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೊಂಡಗಾಂವ್, ಕಲ್ವಾಡ ಮತ್ತು ಹಿಂಗ್ನಾ ಗ್ರಾಮಗಳಿಗೆ ಬೇಟಿ ನೀಡಿ ರೋಗಿಗಳ ಆರೋಗ್ಯ ತಪಾಸಣೆಯನ್ನು ನಡೆಸಿದ್ದಾರೆ.ಕಳೆದ ಭಾನುವಾರ ನನ್ನ ತಲೆ ಕೂದಲು ಹಠಾತ್ ಉದುರುತ್ತಿದೆ ಎಂದು ವೃದ್ಧೆಯೊಬ್ಬರು ಹೇಳಿದ್ದು, ತನ್ನ ಕೂದಲನ್ನು ಚಿಕ್ಕ ಚೀಲದಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಯುವಕನೋರ್ವ ಮಾತನಾಡುತ್ತಾ, ಕಳೆದ 10 ದಿನಗಳಿಂದ ನನ್ನ ತಲೆ ಕೂದಲು, ಗಡ್ಡ ಉದುರುತ್ತಿದೆ ಎಂದು ಹೇಳಿದ್ದಾರೆ. ಕೂದಲು ಉದುರುತ್ತಿರುವ ಹಿನ್ನೆಲೆ ಹಲವರು ಈಗಾಗಲೇ ತಲೆ ಬೋಳಿಸಿಕೊಂಡಿದ್ದಾರೆ. ಮೂರು ಗ್ರಾಮಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ʼನಾವು ಮಾಹಿತಿ ಪಡೆದ ತಕ್ಷಣ, ಪ್ರಾಥಮಿಕ ತನಿಖೆಗಾಗಿ ಚರ್ಮ ತಜ್ಞರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಗ್ರಾಮಕ್ಕೆ ಕಳುಹಿಸಿದ್ದೇವೆ. ಸುಮಾರು 99 ಪ್ರತಿಶತ ಪ್ರಕರಣಗಳು ನೆತ್ತಿಯ ಶಿಲೀಂಧ್ರಗಳ ಸೋಂಕನ್ನು ತೋರಿಸುತ್ತವೆ, ಇದರಿಂದಾಗಿ ಜನರು ಕೂದಲು ಉದುರುವ ಸಮಸ್ಯೆ ಎದುರಿಸಿದ್ದಾರೆ. ನಾವು 2 ರಿಂದ 4 ರೋಗಿಗಳ ಚರ್ಮದ ಮಾದರಿಗಳನ್ನು ತೆಗೆದುಕೊಂಡು ಸೂಕ್ಷ್ಮವಾಗಿ ಪರಿಶೀಲನೆಗೆ ಅಕೋಲಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದೇವೆ. ನೀರಿನ ಮಾದರಿ ಪರೀಕ್ಷೆಗಳು ಮತ್ತು ಬಯಾಪ್ಸಿ ವರದಿಯು ಇನ್ನಷ್ಠೇ ಬರಬೇಕಿದೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲʼ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. Click