- +91 73497 60202
- [email protected]
- January 22, 2025 1:22 PM
ನ್ಯೂಸ್ ನಾಟೌಟ್: ಉಳ್ಳಾಲ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕರ್ನಾಟಕದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು ಚಿನ್ನಾಭರಣಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ರಾಜ್ಯಾದ್ಯಂತ ಸಾವಿರಾರು ವಾಹನಗಳು ನಕಲಿ ನಂಬರ್ ಪ್ಲೇಟ್ ಅಳವಡಿಸಿ ಓಡಾಡುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಬ್ಯಾಂಕ್ ದರೋಡೆ ಮಾಡಿದ ದರೋಡೆಕೋರರು ಫಿಯೆಟ್ ಕಾರಿನಲ್ಲಿ ತಲಪಾಡಿ ಟೋಲ್ ಮೂಲಕ ತೆರಳಿದ್ದಾರೆ ಎಂಬುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇನ್ನೊಂದು ಕಾರ್ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ ನಿಂದ ಪಾಸಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ, ನಕಲಿ ನಂಬರ್ ಪ್ಲೇಟ್ ನ ಹತ್ತಾರು ವಾಹನಗಳು ಟೋಲ್ ಗೇಟ್ ಮೂಲಕ ಪಾಸಾಗಿವೆ ಎಂಬ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಬ್ಯಾಂಕ್ ದರೋಡೆಕೋರರು ಪಾಸಾಗಿದ್ದಾರೆಂಬ ಶಂಕೆಯಿಂದ ಪರಿಶೀಲಿಸಿದ್ದರೂ, ಅವರು ಸರ್ವಿಸ್ ರಸ್ತೆಯ ಮೂಲಕ ತೆರಳಿದ್ದಾರೆ ಎಂಬುದು ಬಳಿಕ ಗೊತ್ತಾಗಿದೆ. ಆದರೆ, ಆ ಟೋಲ್ ಗೇಟ್ ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರು, ಟೆಂಪೋ ಟ್ರಾವೆಲ್ಲರ್, ಲಾರಿ ಸೇರಿದಂತೆ ಹತ್ತಾರು ವಾಹನಗಳು ಫೇಕ್ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಅಂದರೆ ವಾಹನದಲ್ಲಿ ಇರುವ ನಂಬರೇ ಬೇರೆ, ಫಾಸ್ಟ್ ಟ್ಯಾಗ್ ರೀಡ್ ಮಾಡುವ ನಂಬರೇ ಬೇರೆ ಎಂಬುದು ಗೊತ್ತಾಗಿದೆ. ಈ ನಕಲಿ ನಂಬರ್ ಪ್ಲೇಟನ್ನು ಟೋಲ್ ಗೇಟ್ನವರು ಪರಿಶೀಲಿಸುವುದಿಲ್ಲ. ಯಾಕೆಂದರೆ, ಫಾಸ್ಟ್ ಟ್ಯಾಗ್ ನಿಂದ ಹಣ ಪಾವತಿಯಾಗಿ ಗೇಟ್ ಓಪನ್ ಆಗುತ್ತದೆ, ವಾಹನ ಮುಂದೆ ಹೋಗುತ್ತದೆ. ಆ ಸಂದರ್ಭ ವಾಹನದ ನಂಬರ್ ಹಾಗೂ ಫಾಸ್ಟ್ ಟ್ಯಾಗ್ನಲ್ಲಿ ಬಂದ ನಂಬರನ್ನು ಟೋಲ್ ಸಿಬ್ಬಂದಿ ಟ್ಯಾಲಿ ಮಾಡುವುದಿಲ್ಲ. ಅಷ್ಟೊಂದು ಸಮಯಾವಕಾಶವೂ ಅವರಿಗೆ ಇರುವುದಿಲ್ಲ. ಆದರೆ ಪೊಲೀಸರು ಕಳೆದ ಮೂರು ದಿನದ ಸಿಸಿ ಕ್ಯಾಮರಾ ದೃಶ್ಯವನ್ನು ಪರಿಶೀಲಿಸಿದಾಗ ಇದೊಂದೇ ಟೋಲ್ಗೇಟ್ನಲ್ಲೇ ಹತ್ತಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್ ಇರುವ ವಾಹನಗಳು ಸಂಚರಿಸಿರುವುದು ಪತ್ತೆಯಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿ ತಿಳಿಸಿದೆ. ಬ್ಯಾಂಕ್ ದರೋಡೆಯಿಂದಾಗಿ ಮತ್ತೊಂದು ಅಕ್ರಮ ದಂದೆ ಬಯಲಾಗಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ