- +91 73497 60202
- [email protected]
- January 22, 2025 7:15 PM
ನ್ಯೂಸ್ ನಾಟೌಟ್ : ಕನ್ನಡ ಬಾರದೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಸಹ ಪರಿಸ್ಥಿತಿ ವಿವರಿಸಲಾರದೆ ಸ್ಪೇನ್ ಪ್ರಜೆ ಪರದಾಡಿದ್ದಾನೆ. ಆತನ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ ಘಟನೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‍ನ ಮನೆಯೊಂದರಲ್ಲಿ ವರದಿಯಾಗಿದೆ. ಜ.15ರಂದು ರಾತ್ರಿ 8.30ರ ಸುಮಾರಿಗೆ ಸ್ಪೇನ್ ಪ್ರಜೆ ಜೀಸಸ್ ಅಬ್ರಿಲ್ ಎಂಬವರ ಬಾಡಿಗೆಗೆ ವಾಸವಿದ್ದ ಲ್ಯಾಂಗ್ ಫೋರ್ಡ್ ಟೌನ್ ನ ಮನೆಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ, ಆದರೆ ತಡವಾಗಿ ದೂರು ದಾಖಲು ಮಾಡಲಾಗಿದೆ. ಈ ವೇಳೆ ಆತಂಕಗೊಂಡ ಜೀಸಸ್ ಅಬ್ರಿಲ್, ಮತ್ತೊಂದು ರೂಮ್ ಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸಹಾಯವಾಣಿ ಸಿಬ್ಬಂದಿ ಕರೆ ಸ್ವೀಕರಿಸಿದಾಗ ಕನ್ನಡ ಬಾರದ ಜೀಸಸ್ ಅಬ್ರಿಲ್, ಗಾಬರಿಯಿಂದಾಗಿ ಇಂಗ್ಲೀಷ್ ನಲ್ಲಿಯೂ ವಿವರಿಸದೆ ಪೇಚಿಗೆ ಸಿಲುಕಿದ್ದಾರೆ. ಸ್ಪ್ಯಾನಿಸ್ ಅರ್ಥವಾಗದ ಸಹಾಯವಾಣಿ ಸಿಬ್ಬಂದಿ ಬೇರೆ ವಿಧಿಯಿರದೆ ಕರೆ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ್ದ ಖದೀಮರು ಅಷ್ಟೊತ್ತಿಗಾಗಲೇ ನಗದು, ಲ್ಯಾಪ್‍ಟಾಪ್, ಪ್ಲಾಟಿನಂ ಉಂಗುರ, ಸ್ಪೇನ್ ನ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ್, ಭಾರತದ ಡೆಬಿಟ್ ಕಾರ್ಡ್‍ಗಳು ಸೇರಿದಂತೆ 82 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಜೀಸಸ್ ಅಬ್ರಿಲ್ ಮನೆ ಮಾಲಕರಿಗೆ ಕರೆ ಮಾಡಿ, ಅವರ ಮೂಲಕ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿರುವ ಜೀಸಸ್ ಅಬ್ರೀಲ್, 2 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡ ಬರುತ್ತಿರಲಿಲ್ಲ, ಇಂಗ್ಲಿಷ್ ಕೂಡ ಅಷ್ಟಾಗಿ ಕಲಿತಿರಲಿಲ್ಲ, ಆದ್ದರಿಂದ ಘಟನೆ ವಿವರಿಸಲಾಗಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ