ನ್ಯೂಸ್ ನಾಟೌಟ್: ಜಮ್ಮು ಕಾಶ್ಮೀರವನ್ನು ನಿಗೂಢ ಕಾಯಿಲೆಯೊಂದು ವಿಪರೀತವಾಗಿ ಕಾಡುತ್ತಿದ್ದು, ರಜೌರಿ ಪ್ರದೇಶದಲ್ಲಿ ಈ ನಿಗೂಢ ಕಾಯಿಲೆಗೆ ಒಟ್ಟು 17 ಮಂದಿ ಬಲಿಯಾಗಿದ್ದಾರೆ.
ಒಂದೇ ಕುಟುಂಬದ ಮೂರು ಜನರು ಸೇರಿ ಒಟ್ಟು 17 ಜನರು ಅಸಹಜ ಸಾವಿಗೆ ಗುರಿಯಾಗಿದ್ದಾರೆ. ಬಾದಲ್ ಗ್ರಾಮದಲ್ಲಿನ ಈ ಸರಣಿ ಸಾವಿನಿಂದ ಆತಂಕ ಸೃಷ್ಟಿಯಾಗಿದೆ. 17 ಜನರ ಈಗಾಗಲೇ ಪ್ರಾಣಬಿಟ್ಟಿದ್ದು ಇನ್ನೂ ಮೂವರು ಜನರು ಅಸ್ವಸ್ಥಗೊಂಡಿದ್ದು ಅಲ್ಲಿಯ ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ನಿಗೂಢ ಕಾಯಿಲೆ ಹರಡುತ್ತಿರುವುದರಿಂದ ಜಿಲ್ಲಾಡಳಿತ ಅಲರ್ಟ್ ಆಗಿದೆ. ಈ ಬಗ್ಗೆ ರೋಗ ಲಕ್ಷಣ ಕಂಡುಕೊಳ್ಳುವಿಕೆ ಮತ್ತು ಅಧ್ಯಯನಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಇಡೀ ಗ್ರಾಮವನ್ನ ಕಂಟೈನ್ಮೆಂಟ್ ವಲಯಾಗಿ ಘೋಷಣೆ ಮಾಡಿದೆ. ಗ್ರಾಮವನ್ನು ಮೂರು ಭಾಗಗಳಾಗಿ ವಿಂಗಡಿಸಿ ಕಂಟೈನ್ಮೆಂಟ್ ಎಂದು ಘೋಷಿಸಿದೆ. ಇನ್ನು ಕಾಯಿಲೆಯ ಬಗ್ಗೆ ಹಾಗೂ ಜನರ ಆರೋಗ್ಯದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದೆ.
ಇನ್ನು ನಿಗೂಢವಾಗಿ ಸಾವನ್ನಪ್ಪಿದವರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಎಲ್ಲಾ ರೀತಿಯ ಸಾರ್ವಜನಿಕ ಹಾಗೂ ಖಾಸಗಿ ಸಭೆಗಳಿಗೆ ಅಲ್ಲಿ ನಿಷೇಧ ಹೇರಲಾಗಿದೆ. ಇಡೀ ಗ್ರಾಮದ ಮೇಲೆ ನಿಗಾ ವಹಿಸಲು ವಿಶೇಷ ಅಧಿಕಾರಿಗಳ ನೇಮಕವನ್ನು ಕೂಡ ಮಾಡಲಾಗಿದೆ. ಆಸ್ಪತ್ರೆಗಳು ಸದಾ ಚಿಕಿತ್ಸೆಗೆ ಸಿದ್ಧವಾಗಿರುವಂತೆ ಖುದ್ದು ಅಲ್ಲಿನ ಸಿಎಂ ಆದೇಶ ಹೊರಡಿಸಿದ್ದಾರೆ. ಸಾವನ್ನಪ್ಪಿದವರ ಮಾದರಿಗಳನ್ನು ಸಂಗ್ರಹಿಸಿ ಆರೋಗ್ಯಾಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಗ್ರಾಮದ ನೀರಿನಲ್ಲಿ ವಿಷಕಾರಕ ಅಂಶಗಳ ಪತ್ತೆಗೂ ಕೂಡ ತಂಡವನ್ನು ರಚನೆ ಮಾಡಲಾಗಿದೆ.