ನ್ಯೂಸ್ ನಾಟೌಟ್ : ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಹೊಗಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಈ ವಿಡಿಯೋ ಪರ-ವಿರೋಧದ ಚರ್ಚೆಗೆ ಗುರಿಯಾಗಿದೆ. ಐಐಟಿ-ಮದ್ರಾಸ್ ನಿರ್ದೇಶಕ ವಿ.ಕಾಮಕೋಟಿ ಅವರು ದೇಶಿ ಗೋವಿನ ತಳಿಗಳ ಸಂರಕ್ಷಣೆ ಮತ್ತು ಸಾವಯವ ಕೃಷಿಯ ಮಹತ್ವದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಗೋಮೂತ್ರದ ಕುರಿತು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಜನವರಿ 15 ರಂದು ನಡೆದ ಸಂಕ್ರಾಂತಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸನ್ಯಾಸಿಯೊಬ್ಬರು ಒಮ್ಮೆ ಜ್ವರ ಬಂದಿದ್ದಾಗ ಗೋಮೂತ್ರ ಸೇವಿಸಿದರು. ಅನ್ಯ ಔಷಧೋಪಚಾರ ಮಾಡಲಿಲ್ಲ. ಜ್ವರ ಗುಣವಾಯಿತು. ಗೋಮೂತ್ರವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಜೀರ್ಣ ವ್ಯವಸ್ಥೆ ವೃದ್ಧಿಗೂ ಸಹಕಾರಿ. ಗೋಮೂತ್ರದ ಔಷಧೀಯ ಮಹತ್ವವನ್ನು ಪರಿಗಣಿಸಬೇಕು. ಇದು ಸಾವಯವ ಕೃಷಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ,’ ಎಂದು ಹೇಳಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ತಂಥೈ ಪೆರಿಯಾರ್ ದ್ರಾವಿಡರ್ ಕಳಗಂ ನಾಯಕ ಕೆ. ರಾಮಕೃಷ್ಣನ್ ಅವರು”ದೇಶದಲ್ಲಿ ವಿಜ್ಞಾನ ಆಧರಿತ ಶಿಕ್ಷಣವನ್ನು ಹಾಳುಮಾಡುವುದು ಕೇಂದ್ರದ ಉದ್ದೇಶವಾಗಿದ್ದು, ಐಐಟಿಯಂತಹ ಮಹತ್ತರ ಸಂಸ್ಥೆಯ ಮುಖ್ಯಸ್ಥರ ಬಾಯಲ್ಲಿ ಗೋಮೂತ್ರದ ಬಗ್ಗೆ ಹೇಳಿಸಲಾಗುತ್ತಿದೆ.ತಮ್ಮ ಮಾತುಗಳಿಗೆ ಕಾಮಕೋಟಿ ಅವರು ಆಧಾರ ಒದಗಿಸಬೇಕು. ಅದು ಸಾಧ್ಯವಾಗದಿದ್ದರೆ ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಈ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ,’ ಎಂದು ಒತ್ತಾಯಿಸಿದ್ದಾರೆ.ಪ್ರೊ.ಕಾಮಕೋಟಿ ಅವರು 2022ರ ಜನವರಿ 17ರಂದು ಐಐಟಿ-ಎಂ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದು,ಡಿಆರ್ಡಿಒ ಅಕಾಡೆಮಿ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತರು.