ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ಬಸ್ ಚಾಲನೋರ್ವ ರೀಲ್ಸ್ ನೋಡ್ತಾ ಬಸ್ ಚಲಾಯಿಸಿರುವುದರ ಬಗ್ಗೆ ವರದಿಯಾಗಿತ್ತು.ಇದೀಗ ಎಮರ್ಜೆನ್ಸಿ ಟೈಮ್ನಲ್ಲಿ ಡಾಕ್ಟರ್ ಒಬ್ಬರು ರೀಲ್ಸ್ ನೋಡ್ತಾ ಕಾಲ ಕಳೆದಿರುವುದರ ಬಗ್ಗೆ ವರದಿಯಾಗಿದೆ.ಮಾತ್ರವಲ್ಲ ವೈದ್ಯ ಮಾಡಿರುವ ನಿರ್ಲಕ್ಷ್ಯತನಕ್ಕೆ ಮಹಿಳೆಯ ಪ್ರಾಣ ಪಕ್ಷಿಯೇ ಹೊರಟು ಹೋಗಿದೆ. ಹೌದು, ಎದೆ ನೋವು ಅಂತ ಆಸ್ಪತ್ರೆಗೆ ಬಂದ ಮಹಿಳೆಗೆ ಚಿಕಿತ್ಸೆ ನೀಡುವ ಬದಲು ವೈದ್ಯನೋರ್ವ ಇನ್ಸ್ಟಾಗ್ರಾಮ್ ರೀಲ್ಸ್ ನೋಡುತ್ತಾ ಕೂತ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಲಕ್ನೋದ ಮಹಾರಾಜ ತೇಜ್ ಸಿಂಗ್ ಜಿಲ್ಲಾಸ್ಪತ್ರೆಯಲ್ಲಿ ನಡದ ಘಟನೆ ಇದಾಗಿದ್ದು,ಇಡೀ ಘಟನೆ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಪ್ರವೇಶ್ ಕುಮಾರಿ ಎನ್ನುವವರು ತೀವ್ರ ಎದೆನೋವುಗೊಂಡು ಆಸ್ಪತ್ರೆಗೆ ಬರುತ್ತಾರೆ.ಮಗ ಗುರುಶರಣ್ ಸಿಂಗ್ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಡಾಕ್ಟರ್ ಬಳಿ ಬಂದಿದ್ದಾರೆ. ಈ ಸಮಯದಲ್ಲಿ ಅಲ್ಲಿ ಆದರ್ಶ್ ಸೆಂಗರ್ ಎನ್ನುವ ಡಾಕ್ಟರ್ ಕರ್ತವ್ಯದಲ್ಲಿದ್ದರು.ವಿಪರ್ಯಾಸ ಅಂದ್ರೆ ರೋಗಿಯನ್ನು ಒಂಚೂರು ನೋಡದೇ ಮೊಬೈಲ್ ನೋಡುತ್ತಾ ಕಾಲ ಕಳೆದಿರೋದನ್ನು ವಿಡಿಯೋ ಮೂಲಕ ನೋಡಬಹುದು. ಆದರೆ ಮಹಿಳೆ ನೋವಿನಿಂದ ನರಳಿ ನರಳಿ ಕೊನೆಗೆ ಪ್ರಾಣವನ್ನು ಬಿಡುತ್ತಾರೆ. ಇದೇ ವಿಚಾರ ರೋಗಿಯ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಎದೆ ನೋವು ಅಂತ ಬಂದ ಮಹಿಳೆಯನ್ನು ಬೆಡ್ನಲ್ಲಿ ಮಲಗಿಸಲಾಗಿದೆ. ಈ ವೇಳೆ ಡಾಕ್ಟರ್ ಆದರ್ಶ್ ಅಲ್ಲೇ ಕೂತಿದ್ದರೂ ಕಣ್ಣೆತ್ತಿಯೂ ನೋಡಲ್ಲ. ರೋಗಿಯನ್ನು ಪರೀಕ್ಷೆ ಮಾಡುವ ಬದಲಿಗೆ ಇನ್ಸ್ಟಾಗ್ರಾಮ್ ರೀಲ್ಸ್ ನೋಡುತ್ತಿದ್ದರು. ಹೀಗಾಗಿ ರೋಗಿಯನ್ನು ನರ್ಸ್ ಹಾಗೂ ಇತರೆ ಸಿಬ್ಬಂದಿಗಳು ಪರೀಕ್ಷೆ ಮಾಡಲು ಶುರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಹಿಳೆಯ ಮಗ ಕಣ್ಣಿರಿಡುತ್ತಾ “ನನ್ನ ತಾಯಿಯ ಸ್ಥಿತಿ ಹದಗೆಟ್ಟಿದ್ದರೂ, ಡಾ . ಸೆಂಗಾರ್ ಚಿಕಿತ್ಸೆ ನೀಡಲು ಬರಲೇ ಇಲ್ಲ. ಬಹಳ ಸಮಯದ ನಂತರ ಎದ್ದು ಬಂದು ನೋಡಿದಾಗ, ಅವರು ಆದಾಗಲೇ ಮೃತಪಟ್ಟಿದ್ದರು ಎಂದಿದ್ದಾರೆ. ಆಸ್ಪತ್ರೆಯಲ್ಲಿ ಪ್ರತಿಭಟನೆ ಸೇರಿದಂತೆ ಉದ್ವಿಗ್ನತೆ ಹೆಚ್ಚಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಕಂಡ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಮದನ್ ಲಾಲ್ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವೈದ್ಯರ ವಿರುದ್ಧ ಕಠಿಣ ಇಲಾಖಾ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.