ನ್ಯೂಸ್ ನಾಟೌಟ್: ಈ ಕಥೆ ಕೇಳಿದ್ರೆ ನಿಜಕ್ಕೂ ನೈಜ ಘಟನೆಯೇ ಎಂದು ಅನ್ನಿಸಬಹುದು. ಆದರೆ ಈ ಘಟನೆ ನಡೆದಿದ್ದು ಮಂಗಳೂರಿನಲ್ಲಿ. ಹೌದು, ಕೇರಳದ ಕಣ್ಣೂರಿನ 67 ವರ್ಷದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು. ವಿಶೇಷವೆಂದರೆ ಸೋಮವಾರ ತಡರಾತ್ರಿ ಕಣ್ಣೂರಿನ ಶವಾಗಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.ಅರೆ! ಇದು ಹೇಗೆ ಸಾಧ್ಯ ?
ಕೇರಳದ ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿ ಪವಿತ್ರನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಮುಂಜಾನೆ ದಾಖಲು ಮಾಡಲಾಗಿತ್ತು. ಅವರ ಸ್ಥಿತಿಯು ತೀರಾ ಹದಗೆಟ್ಟಿತ್ತು. ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ, ವೆಂಟಿಲೇಟರ್ನಿಂದ ತೆಗೆದುಬಿಡುವುದೇ ಒಳ್ಳೆಯದು ಎಂದು ವೈದ್ಯರು ಅಭಿಪ್ರಾಯಪಟ್ಟು ಕುಟುಂಬದವರಿಗೆ ತಿಳಿಸಿದರು. ಸಂಜೆಯ ಹೊತ್ತಿಗೆ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ದೇಹವನ್ನು ಊರಿಗೆ ಸಾಗಿಸಲು ವ್ಯವಸ್ಥೆಯನ್ನೂ ಮಾಡಲಾಯಿತು.
ಇದಾದ ಬಳಿಕ ಸಂಜೆ 6.30ರ ಸುಮಾರಿಗೆ ಅವರನ್ನು ಆಂಬ್ಯುಲೆನ್ಸ್ನಲ್ಲಿ ಕಣ್ಣೂರಿಗೆ ಕಳುಹಿಸಲಾಯಿತು. ರಾತ್ರಿ ತುಂಬಾ ತಡವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಸರಿಸುಮಾರು ರಾತ್ರಿ 11.30 ಕ್ಕೆ, ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುವಾಗ, ಕರ್ತವ್ಯದಲ್ಲಿದ್ದ ಅಟೆಂಡರ್ ಜಯನ್ ಅವರು ಶವವನ್ನು ಗಮನಿಸಿದರು.ಆಂಬ್ಯುಲೆನ್ಸ್ ತೆರೆದಾಗ ಕೈಗಳು ಚಲಿಸುತ್ತಿದ್ದಂತೆ ಭಾಸವಾಗಿತ್ತು.ಅನುಮಾನದಲ್ಲೇ ಎಕೆಜಿ ಆಸ್ಪತ್ರೆಯ ವೈದ್ಯಕೀಯ ತಂಡ ತಕ್ಷಣ ಮಧ್ಯ ಪ್ರವೇಶಿಸಿ ಪವಿತ್ರನ್ ಬದುಕಿರುವುದನ್ನು ಖಚಿತಪಡಿಸಿದರು.
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈ ಘಟನೆಯಿಂದ ಪವಿತ್ರನ್ ಅವರ ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಎಕೆಜಿ ಆಸ್ಪತ್ರೆಯ ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಯವರು ಮಾಡಿದ ಸಾವಿನ ದೃಢೀಕರಣದ ನಿಖರತೆಯ ಬಗ್ಗೆ ಅನುಮಾನಗಳು ಎದ್ದಿವೆ.