ನ್ಯೂಸ್ ನಾಟೌಟ್: ಕೋವಿಡ್ ನ ಬಳಿಕ ಹೆಚ್ಎಂಪಿವಿ ಸೋಂಕು ಚೀನಾದಲ್ಲಿ ವ್ಯಾಪಕವಾಗಿದ್ದು, ಇದರ ಬೆನ್ನಲ್ಲೇ ಭಾರತದಲ್ಲೂ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಆರೋಗ್ಯ ಸೇವೆಗಳ ಮಹಾನಿರ್ದೇಶಕರಾದ ಡಾ.ಅತುಲ್ ಗೋಯಲ್ ಅವರು ಪ್ರತಿಕ್ರಿಯೆ ನೀಡಿದ್ದು, ಹೆಚ್ಎಂಪಿವಿ ವೈರಸ್ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಕಾಣಿಸಿಕೊಳ್ಳಬಹುದು. ದೇಶದಲ್ಲಿ 2024ರ ಡಿಸೆಂಬರ್ ನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿಲ್ಲ. ಒಂದೊಮ್ಮೆ ಸಮಸ್ಯೆ ಉಲ್ಬಣಿಸಿದರೂ ನಮ್ಮ ಆಸ್ಪತ್ರೆಗಳಲ್ಲಿ ಅದಕ್ಕೆ ಬೇಕಾದಷ್ಟು ವ್ಯವಸ್ಥೆಗಳು ಲಭ್ಯವಿದೆ ಎಂದು ಹೇಳಿದರು. ಇದೇ ವೇಳೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.
ಸಾಮಾನ್ಯವಾಗಿ ಉಸಿರಾಟ ಸಂಬಂಧಿತ ಸಾಂಕ್ರಾಮಿಕ ರೋಗಗಳು ಮಕ್ಕಳು ಹಾಗೂ ಹಿರಿಯರಲ್ಲಿ ಅತೀ ಬೇಗನೆ ಕಾಣಿಸಿಕೊಳ್ಳುತ್ತದೆ. ಚೀನಾದಲ್ಲಿ ಚಳಿಗಾಲದಲ್ಲಿ ಈ ರೀತಿಯ ಕೆಲ ವೈರಸ್ ಗಳು ಆತಂಕ ಸೃಷ್ಟಿಸುವುದು ಸಾಮಾನ್ಯವಾಗಿದೆ. ಕೆಲ ವೈರಸ್ ಹೆಚ್ಚು ತಲ್ಲಣ ಸೃಷ್ಟಿಸಲಿದೆ. ಕಳೆದ 5 ವರ್ಷದಲ್ಲಿ ಪ್ರತಿ ಚಳಿಗಾಲದಲ್ಲಿ ಚೀನಾದಲ್ಲಿ ಕೆಲ ವೈರಸ್ ಆತಂಕ ಕಂಡುಬರುತ್ತಿದೆ. ಆದರೆ, ಇದರಿಂದ ಭಾರತಕ್ಕೆ ಯಾವುದೇ ಆತಂಕವಿಲ್ಲ ಎಂದಿದ್ದಾರೆ.
5 ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲೂ ಚೀನಾ ಎಲ್ಲವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ ಕೋವಿಡ್ ವೈರಸ್ ಜಗತ್ತಿಗೆ ಆವರಿಸಿ ವಿಶ್ವವೇ ಸ್ತಬ್ಧವಾಗಿತ್ತು. ಆಸ್ಪತ್ರೆಗಳು ಭರ್ತಿಯಾಗಿತ್ತು, ಎಲ್ಲಾ ದೇಶಗಳು ಕೋವಿಡ್ ಪರಿಸ್ಥಿತಿ ಎದುರಿಸಲು ಹೆಣಗಾಡಿತ್ತು. ಕೊರೋನಾ ಮೊದಲ ಅಲೆ, ಎರಡನೇ ಅಲೆ, ಮೂರನೇ ಅಲೆ ಹೀಗೆ ಒಂದರ ಹಿಂದೆ ಮತ್ತೊಂದರಂತೆ ವಿಶ್ವವನ್ನೇ ತತ್ತರಿಸುವಂತೆ ಮಾಡಿತ್ತು. ಇದೀಗ ಚೀನಾದಲ್ಲಿ ಕಾಣಿಸಿಕೊಂಡ HMPV ವೈರಸ್ ಕೋವಿಡ್ ರೀತಿ ಆತಂಕ ಸೃಷ್ಟಿಸಿದೆ.
Click