ನ್ಯೂಸ್ ನಾಟೌಟ್: ಚೀನಾ 6ನೇ ತಲೆಮಾರಿನ ಯುದ್ಧ ವಿಮಾನ ಪರೀಕ್ಷಿಸುತ್ತಿದೆ, ತೇಜಸ್ ಯುದ್ಧ ವಿಮಾನಗಳ ಸ್ವಾಧೀನಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ (Air Chief Marshal A.P. Singh) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ತಯಾರಾಗುತ್ತಿರುವ ತೇಜಸ್ ಯುದ್ಧ ವಿಮಾನಗಳ ಸ್ವಾಧೀನ ವಿಳಂಬದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
21ನೇ ಸುಬ್ರೋತೋ ಮುಖರ್ಜಿ ಸೆಮಿನಾರ್ನಲ್ಲಿ ವಾಯುಪ್ರದೇಶದಲ್ಲಿ ಸ್ವಾವಲಂಬನೆ ವಿಷಯದ ಕುರಿತು ಮಾತನಾಡಿದ ವಾಯುಪಡೆಯ ಮುಖ್ಯಸ್ಥರು ತೇಜಸ್ ಯುದ್ಧ ವಿಮಾನ ಪಡೆಯಲು ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಯೋಜನೆಯನ್ನು 1984ರಲ್ಲಿ ಪ್ರಾರಂಭಿಸಲಾಯಿತು. 17 ವರ್ಷಗಳ ನಂತರ ವಿಮಾನ ಮೊದಲ ಹಾರಾಟ ನಡೆಸಿತು. 16 ವರ್ಷಗಳ ನಂತರ, ತೇಜಸ್ (Tejas) ಅನ್ನು ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು. ಇಂದು ನಾವು 2025 ರಲ್ಲಿದ್ದೇವೆ. ಆದ್ರೆ ಇನ್ನೂ ಮೊದಲ 40 ವಿಮಾನಗಳಿಗಾಗಿ ಕಾಯುತ್ತಿದ್ದೇವೆ. ಇದು ನಮ್ಮ ಉತ್ಪಾದನಾ ಸಾಮರ್ಥ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಸ್ಪರ್ಧೆಯನ್ನು ಉತ್ತೇಜಿಸಬೇಕಾಗಿದೆ, ಅದಕ್ಕಾಗಿ ನಾವು ಅನೇಕ ಮೂಲಗಳನ್ನು ಹೊಂದಿರಬೇಕು. ಇದು ಸಾಧ್ಯವಾಗದಿದ್ದರೆ ಪರಿಸ್ಥಿತಿ ಬದಲಾಗುವುದಿಲ್ಲ. ನಮ್ಮ ಸಾಮರ್ಥ್ಯ ವೃದ್ಧಿ ಬಹಳ ಮುಖ್ಯ, ಉತ್ಪಾದನಾ ಘಟಕಗಳು ಆಧುನಿಕ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಅವರ ಉದ್ಯೋಗಿಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹಣ ವಿನಿಯೋಗಿಸಬೇಕು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಬೇಕು ಎಂದರು. ನಾವು ಪ್ರಸ್ತುತ ರಕ್ಷಣಾ ಬಜೆಟ್ ನ ಐದು ಪ್ರತಿಶತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದೇವೆ. ಆದರೆ ಅದನ್ನು 15%ಗೆ ಹೆಚ್ಚಿಸಬೇಕು. ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ, ಅವುಗಳು ತಮ್ಮ ಉಪಯುಕ್ತತೆ ಕಳೆದುಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಭಾರತದ ತೇಜಸ್ ಯುದ್ಧ ವಿಮಾನಗಳು 5ನೇ ತಲೆಮಾರಿನದ್ದಾಗಿದ್ದು, ಅವುಗಳಲ್ಲಿ ಸಾಕಷ್ಟು ವಿಳಂಬವಾಗಿದೆ. ಇದೇ ಸಮಯದಲ್ಲಿ ಚೀನಾ (China) ತನ್ನ 6ನೇ ತಲೆಮಾರಿನ ಯುದ್ಧ ವಿಮಾನವನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಸವಾಲುಗಳು ಹೆಚ್ಚುತ್ತಿವೆ. ಚೀನಾ ತನ್ನ 6ನೇ ತಲೆಮಾರಿನ ಜೆ-20 ಮತ್ತು ಜೆ-35 ವಿಮಾನಗಳನ್ನು ದಾಖಲೆ ಸಮಯದಲ್ಲಿ ರಹಸ್ಯ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಿದೆ ಎಂದರು.
Click